ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗರಿಷ್ಠ ಪ್ರಮಾಣದ ಕಂದಾಯ ಏರಿಕೆ ಬೇಡ

Vishwanath S
Updated On : 20 Feb 2014, 11:39 am

ನರಸಿಂಹರಾಜಪುರ: ಗ್ರಾಪಂ ಕಂದಾಯ ಹಾಗೂ ನೀರಿನ ತೆರಿಗೆಯನ್ನು ಪರಿಷ್ಕರಿಸುವಾಗ ಗರಿಷ್ಠ ಪ್ರಮಾಣದಲ್ಲಿ ಕಂದಾಯ ಏರಿಕೆ ಮಾಡಬಾರದು ಎಂದು ಸೀತೂರು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದರು.
ಬುಧವಾರ ಸೀತೂರು ಗ್ರಾಪಂ ಕಚೇರಿ ಆವರಣದಲ್ಲಿ ನಡೆದ 2ನೇ ಸುತ್ತಿನ ಗ್ರಾಮ ಸಭೆಯಲ್ಲಿ ಗ್ರಾಪಂ ಅಭಿವೃದ್ಧಿ  ಅಧಿಕಾರಿ ಸಂತೋಷ ಕುಮಾರ್ ಕಾಮಗಾರಿ ಬಗ್ಗೆ ವಿವರಿಸಿ, 2003-04ರಲ್ಲಿ ಕಂದಾಯ ಪರಿಷ್ಕರಣೆ ಮಾಡಿದ ನಂತರ ಮತ್ತೆ ಕಂದಾಯ ಪರಿಷ್ಕರಣೆ ಮಾಡಿಲ್ಲ. ಪ್ರತಿವರ್ಷ ಕಂದಾಯ ಪರಿಷ್ಕರಣೆ ಮಾಡಬೇಕಾಗಿತ್ತು. ಕಂದಾಯ ಪರಿಷ್ಕರಣೆ ಮಾಡಿದ ನಂತರ ಪಂಚಾಯ್ತಿ ಕಚೇರಿಯ ನಾಮಫಲಕದಲ್ಲಿ ಹಾಕಲಾಗುವುದು. ತಕರಾರು ಇದ್ದರೆ 1 ತಿಂಗಳ ಒಳಗೆ ತಿಳಿಸಬೇಕಾಗಿದೆ ಎಂದರು.
ಕಡಮೆ ಇಲ್ಲ: ಗ್ರಾಮಸ್ಥ ಶ್ರೀನಾಥ್ ಮಾತನಾಡಿ, 2007ರ ಗ್ರಾಮ ಸಭೆಯಲ್ಲಿ ಸೀತೂರು ಗ್ರಾಪಂ ಮನೆ ಕಂದಾಯ ಹೆಚ್ಚಾಗಿದ್ದರ ಬಗ್ಗೆ ಚರ್ಚೆ ನಡೆದು ಶೇ.25 ಕಡಮೆ ಮಾಡಲು ತೀರ್ಮಾನವಾಗಿದ್ದರೂ, ಕಂದಾಯ ಕಡಿಮೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸೀತೂರು ಗ್ರಾಪಂ ನೋಡಲ್ ಅಧಿಕಾರಿ ಹಾಗೂ ಸಿಡಿಪಿಒ ಜ್ಯೋತಿಲಕ್ಷ್ಮಿ ಮಾತನಾಡಿ, ಈಗ ತೆರಿಗೆ ಪರಿಷ್ಕರಣೆ ಬಗ್ಗೆ ಮಾಹಿತಿ ಮಾತ್ರ ನೀಡುತ್ತಿದ್ದೇವೆ. ಕಂದಾಯ ಪರಿಷ್ಕರಿಸುವಾಗ ಕೆಲವು ನಿಯಮ  ಅನುಸರಿಸಬೇಕಾಗುತ್ತದೆ. ತಾಲೂಕಿನಲ್ಲಿ ಪಟ್ಟಣದ ಸಮೀಪ ಬರುವ ಬಿ. ಕಣಬೂರು, ನಾಗಲಾಪುರ ಗ್ರಾಪಂ ಬಿಟ್ಟು ಉಳಿದ ಗ್ರಾಮೀಣ ಭಾಗದ ಗ್ರಾಪಂಗಳಿಗೆ ಸಮಾನ ಕಂದಾಯ ವಿಧಿಸಲಾಗುವುದು. ಗ್ರಾಪಂಗೆ ತೆರಿಗೆಯೇ ಮೂಲ ಆದಾಯವಾಗಿದೆ. ಗ್ರಾಪಂನಲ್ಲಿ ಬಿಲ್ ಕಲೆಕ್ಟಕ್ಟರ್ ಇಲ್ಲದೆ ಇರುವುದರಿಂದ ಗ್ರಾಮಸ್ಥರೇ ಮನೆ ಕಂದಾಯ ತಂದು ಕಟ್ಟಬೇಕು ಎಂದರು.
ಬೆಳ್ಳೂರಿನಲ್ಲೂ ಗ್ರಾಮಸಭೆ: ಗ್ರಾಪಂ ಸದಸ್ಯ ಎಚ್.ಇ. ದಿವಾಕರ ಮಾತನಾಡಿ, ಸೀತೂರು ಗ್ರಾಪಂ ಕಚೇರಿಯಲ್ಲಿ ಮಾತ್ರ ಗ್ರಾಮ ಸಭೆ ನಡೆಸಿದರೆ ಮಲ್ಲಂದೂರು, ಬೆಳ್ಳೂರು ಭಾಗದ ಗ್ರಾಮಸ್ಥರು ಭಾಗವಹಿಸಲು ತೊಂದರೆಯಾಗುತ್ತದೆ. ಆದ್ದರಿಂದ ಬೆಳ್ಳೂರಿನಲ್ಲೂ ಗ್ರಾಮಸಭೆ ನಡೆಸಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್. ಗಣೇಶ್ ಸಲಹೆ ನೀಡಿ, ಗ್ರಾಪಂ ಅಧ್ಯಕ್ಷರು, ಸದಸ್ಯರು ವಾರದ 3 ದಿನವಾದರೂ ಗ್ರಾಪಂ ಕಚೇರಿಗೆ ಕಡ್ಡಾಯವಾಗಿ ಬರಬೇಕು. ಇದರಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಗ್ರಾಪಂ  ಈಗ ಹೇರಳವಾಗಿ ಅನುದಾನ ಬರುತ್ತಿದ್ದು, ಇದರ ಸದ್ಬಳಕೆ ಮಾಡುವಂತೆ ಸಲಹೆ ನೀಡಿದರು.
2 ಹಸು ಸಾವು: ಪಶು ವೈದ್ಯ ಇಲಾಖೆಯ ಡಾ. ವಿಜಯಕುಮಾರ್ ಮಾಹಿತಿ ನೀಡಿ, ತಾಲೂಕಿನಲ್ಲಿ ಕಾಲುಬಾಯಿ ಜ್ವರದ ಲಸಿಕೆ ಹಾಕಲು ಪ್ರಾರಂಭವಾಗಿದೆ. ಗ್ರಾಮಗಳಿಗೆ ಬರುವ ಮೊದಲೇ ಪ್ರಚಾರ ಮಾಡಿರುತ್ತೇವೆ. ತಾಲೂಕಿನಲ್ಲಿ ಈ ವರ್ಷ 210 ಜಾನುವಾರುಗಳಿಗೆ ಕಾಲುಬಾಯಿ ಜ್ವರ ಕಾಣಿಸಿಕೊಂಡಿತ್ತು. 2 ಹಸು ಸತ್ತು ಹೋಗಿದೆ ಎಂದರು.
ಕಾಲುಬಾಯಿ ಜ್ವರ ಮುಕ್ತ ರಾಷ್ಟ್ರವಾಗಬೇಕು ಎಂದು ಸರ್ಕಾರ ಒಂದು ತಿಂಗಳ ಕಾಲ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದ ಆಂದೋಲನಾ ಹಮ್ಮಿಕೊಂಡಿದೆ ಎಂದರು.
ಅಧ್ಯಕ್ಷತೆ ಸೀತೂರು ಗ್ರಾಪಂ ಅಧ್ಯಕ್ಷೆ ಸುನಂದಾ ವಹಿಸಿದ್ದರು. ನೋಡಲ್ ಅಧಿಕಾರಿ ಜ್ಯೋತಿಲಕ್ಷ್ಮಿ ಉಪಾಧ್ಯಕ್ಷ ಬಾಬು ಪೂಜಾರಿ,  ಸದಸ್ಯ ಎನ್.ಪಿ.ರಮೇಶ್, ಕೆ.ಎಸ್.ಉಮೇಶ್, ರಜನಿ ರಮೇಶ್, ಎಚ್.ಇ.ದಿವಾಕರ, ಬಿ.ಜಿ. ವೀಣಾ,ಬಿ.ವಿ. ಅಶ್ವಿನಿ, ರುಕ್ಮಣಿಯಮ್ಮ ಉಪಸ್ಥಿತರಿದ್ದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಕಾಮಗಾರಿಗಳ ವಿವರ ನೀಡಿದರು. ಶಿಕ್ಷಣ ಇಲಾಖೆ, ಕಂದಾಯ, ಕೃಷಿ, ತಾಪಂ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮೆಸ್ಕಾಂ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement