ಗೆಳೆತನದ ಮುಲಾಜಿಗೆ ಕುಡುಕರಾಗಬೇಡಿ
ಚಿಕ್ಕಮಗಳೂರು: ಮದ್ಯಪಾನ ಮತ್ತು ಮಾದಕ ವಸ್ತು ಸೇವನೆಯಿಂದ ಕೇವಲ ದೇಹಾರೋಗ್ಯ ಮಾತ್ರ ಹಾಳಾಗದೆ ವ್ಯಕ್ತಿತ್ವವೇ ನಾಶವಾಗುತ್ತದೆ. ಆ ಮೂಲಕ ಕುಟುಂಬ ಮತ್ತು ಸಮಾಜದ ತಿರಸ್ಕಾರಕ್ಕೆ ಒಳಗಾಗಿ ಬದುಕಬೇಕಾಗುತ್ತದೆ ಎಂದು ಸಜನ ಮದ್ಯಪಾನ ಮತ್ತು ಮಾದಕ ವಸ್ತು ವ್ಯಸನಿಗಳ ಸಮಗ್ರ ಪುನರ್ವಸತಿ ಚಿಕಿತ್ಸಾ ಕೇಂದ್ರದ ಆಪ್ತ ಸಮಾಲೋಚಕರಾದ ಜನಾರ್ದನ ಶೆಟ್ಟಿ ಹೇಳಿದ್ದಾರೆ.
ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆಯ ಆಶ್ರಯದಲ್ಲಿ ತಾಲೂಕಿನ ಕುರುವಂಗಿ ಗ್ರಾಮದಲ್ಲಿ ಐಡಿಎಸ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಹಾಗೂ ಗ್ರಾಮಸ್ತರಿಗಾಗಿ ಏರ್ಪಡಿಸಿದ್ದ ಮದ್ಯಪಾನದ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ ಹಾಗೂ ಜನಜಾಗೃತಿ ಕಲಾ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉತ್ತಮ ಬದುಕು: ಕುಡಿತದಿಂದ ನಮ್ಮ ಆಯ್ಕೆ ಸಾಮರ್ಥ್ಯ, ಆಸೆ, ಕನಸುಗಳಿಗೆ ಮದ್ಯಪಾನ ನಿದ್ರಾಭಂಗ, ಭ್ರಮಾಧೀನತೆ, ಒತ್ತಡದಿಂದ ಅನಾರೋಗ್ಯಕರ ಜೀವನ ಶೈಲಿ ಶುರುವಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಅಕಾಲ ಮೃತ್ಯುವೂ ಎದುರಾಗುತ್ತದೆ. ಕುಡಿತದಿಂದ ಸಮಾಜದ ಮೇಲಾಗುವ ಪರಿಣಾಮಕ್ಕಿಂತ ಮೊದಲು ಕುಟುಂಬದ ಮೇಲಾಗುತ್ತದೆ. ಯುವ ಜನತೆ ಯಾವುದೋ ಮೋಜಿನ ಸೆಳೆತಕ್ಕೆ ಗೆಳೆತನದ ಮುಲಾಜಿಗಾಗಿ ಕುಡಿತದ ಪಾಶಕ್ಕೆ ಸಿಲುಕದೆ ಉತ್ತಮ ಬದುಕು ಕಟ್ಟಿಕೊಳ್ಳಿ ಎಂದು ಶೆಟ್ಟಿ ಅವರು ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಾಮಚಂದ್ರ ಮಾತನಾಡಿ, ಕುಡಿತದಿಂದ ಅಜೀರ್ಣ, ಊಟದಲ್ಲಿ ನಿರಾಸಕ್ತಿ, ದೇಹದ ಜೀವಸತ್ವಗಳ ನಾಶ, ರಕ್ತ ವಾಂತಿ, ಅರೆಪ್ರಜ್ಞಾವಸ್ಥೆ, ಬುದ್ಧಿಭ್ರಮಣೆ ಲೈಂಗಿಕ ನಿರಾಸಕ್ತಿ, ದೃಷ್ಟಿದೋಷ, ಹೃದಯ ದೌರ್ಬಲ್ಯ, ಮೂತ್ರಜನಕಾಂಗಗಳ ವೈಫಲ್ಯ, ಮೆದುಳು ನರಮಂಡಲಕ್ಕೆ ಧಕ್ಕೆ, ಕೈಕಾಲುಗಳ ನಿಯಂತ್ರಣ ತಪ್ಪುವಂತಹ ಗಂಭೀರ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಹೀಗಾಗಿ, ಕುಡಿತ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಪ್ರತಿಯೊಬ್ಬರೂ ದೂರ ಇರಬೇಕು ಎಂದರು.
ಪ್ರಭಾರ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಮಾತನಾಡಿ, ಮದ್ಯಪಾನ ಸಂಯಮ ಮಂಡಳಿಯ ಕಾರ್ಯ ಚಟುವಟಿಕೆಗಳು ಹಾಗೂ ಮದ್ಯಪಾನದ ಬಗ್ಗೆ ಮಹಾತ್ಮ ಗಾಂಧೀಜಿಯವರ ಅಭಿಪ್ರಾಯಗಳು ಇಂದಿನ ಶೈಕ್ಷಣಿಕ ಸವಾಲುಗಳು, ಸಮಾಜದಲ್ಲಿ ಯುವ ಜನತೆಯ ಪಾತ್ರದ ಬಗ್ಗೆ ವಿವರಿಸಿದರು.
ಇದೇ ವೇಳೆ ಸ್ವಾಸ್ಥ್ಯ ಸಮಾಜದಲ್ಲಿ ಸೇವಾ ಸಂಸ್ಥೆಗಳ ಪಾತ್ರದ ಬಗ್ಗೆ ಐಡಿಎಸ್ಜಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಚ್.ಎಸ್. ಜಗದೀಶಪ್ಪ ಮಾತನಾಡಿದರು. ಕರ್ತಿಕೆರೆ ಗ್ರಾಮ ಪಂಚಾಯಿತಿ ಸದಸ್ಯೆ ರೇಷ್ಮ ಅಧ್ಯಕ್ಷತೆ ವಹಿಸಿದ್ದರು.
ಚಿಕ್ಕಮಗಳೂರು ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಅನಸೂಯ ಜಗದೀಶ್, ಖಜಾಂಚಿ ರೂಪ ಹೇಮಂತ್ ಪ್ರಭು, ಸದಸ್ಯರಾದ ಲೇಖಾಗೌಡ, ಸಖರಾಯಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ತ್ರಿಪುರ ಮಹೇಶ್ವರ, ಐಡಿಎಸ್ಜಿ ಕಾಲೇಜಿನ ಎನ್ಎಸ್ಎಸ್ ಘಟಕದ ಶಿಬಿರಾಧಿಕಾರಿ ಸಂಪತ್ ಕುಮಾರ್, ಸುಧಾಮ ಉಪಸ್ಥಿತರಿದ್ದರು.
ಚಿಕ್ಕಮಗಳೂರು ತಾಲೂಕಿನ ಕುರುವಂಗಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮದ್ಯಪಾನದ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ ಹಾಗೂ ಜನಜಾಗೃತಿ ಕಲಾ ಪ್ರದರ್ಶನದ ಕಾರ್ಯಕ್ರಮದಲ್ಲಿ ಜನಾರ್ದನ ಶೆಟ್ಟಿ ಮಾತನಾಡಿದರು.