ಕಡೂರು ತಾಲೂಕಲ್ಲಿ ವಿದ್ಯುತ್ ವ್ಯಾಪಕ ಬರ
ಕಡೂರು: ಜಿಲ್ಲೆಯ ಬಯಲು ಸೀಮೆ ಕಡೂರು ತಾಲೂಕಿಗೆ ಬರ ಆವರಿಸಿ ಎಂಟತ್ತು ವರ್ಷ ಕಳೆದರೂ ಕೂಡ ಸಮಸ್ಯೆಗಳು ಹೆಚ್ಚಾಗುತ್ತಿದ್ದರೂ ಅವುಗಳ ನಿವಾರಣೆಗಿಂತ ಸಮಸ್ಯೆಗಳೇ ಹೆಚ್ಚಾಗುತ್ತಿವೆ.
ಇಂತಹುದರಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಸರ್ಕಾರ 7 ಗಂಟೆ ತ್ರೀ ಫೇಸ್ ವಿದ್ಯುತ್ ನೀಡಲಾಗುವುದು ಎಂಬ ಮಾತು ಅಕ್ಷರಷಹ ಕಾರ್ಯರೂಪಕ್ಕೆ ಬರದೆ ಕನಿಷ್ಟ 4 ಗಂಟೆ ಕೂಡ ವಿದ್ಯುತ್ ನೀಡಲಾರದ ಸ್ಥಿತಿ ಉದ್ಬವಾಗಿದೆ. ಕಡೂರು ಪಟ್ಟಣದಲ್ಲಿ ಮಾತ್ರ ಮನಸ್ಸಿಗೆ ಬಂದಂತೆ ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ.
ಮೆಸ್ಕಾಂ ಇಲಾಖೆಯು ಯಾವ ರೀತಿ ಇದೆ ಎಂದರೆ ಹಿಂದಿನಂತೆ ಲೋಡ್‌ಶೆಡ್‌ಡಿಂಗ್ ಮಾಡುವುದಾಗಲೀ ಅಥವಾ ನಿಲುಗಡೆ ಮಾಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಪದ್ದತಿ ಇತ್ತು. ಇದೀಗ ಎಲ್ಲ ಪದ್ದತಿಯನ್ನು ಗಾಳಿಗೆ ತೂರುವ ಮೂಲಕ ರೈತರು ಹಾಗು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸದಂತಹ ಸ್ಥಿತಿಗೆ ಮೆಸ್ಕಾಂ ಬಂದಿದೆ.
ವಿದ್ಯುತ್ ಕಣ್ಣಾಮುಚ್ಚಾಲೆ: ಒಂದೆಡೆ ಬಿರು ಬೇಸಿಗೆಯಿಂದ ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಭಂಗ, ಮತ್ತೊಂದೆಡೆ ಪರೀಕ್ಷೆ ಸಮೀಪಿಸುತ್ತಿರುವುದರಿಂದ ಓದುವ ಮಕ್ಕಳಿಗೆ ವಿದ್ಯುತ್ ಕಣ್ಣಾಮಚ್ಚಾಲೆ ಆಟದಿಂದಾಗಿ ಸಂಕಟ ಅನುಭವಿಸುತ್ತಿದ್ದಾರೆ.
ತಾಲೂಕಿನ ಸುಮಾರು 132 ಹಳ್ಳಿಗಳು ನೀರಿನ ಸಮಸ್ಯೆ ಎದುರಿಸುತ್ತಿವೆ ಮತ್ತು ಕೆಲವೆಡೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಕೆಲವೆಡೆ ನೀರಿದ್ದರೂ ಸಹ ವಿದ್ಯುತ್ ಇಲ್ಲದೆ ಜನರು ಭವಣೆ ಪಡುವಂತಾಗಿದೆ.
ಕಡೂರು ತಾಲೂಕಿನ ದುರಾದೃಷ್ಟವೆಂದರೆ ನೀರಿನ ಶಾಶ್ವತ ಜಲಮೂಲಗಳು ಇಲ್ಲದೆ ಮಳೆಗಾಲದಲ್ಲಿ ಮದಗದಕೆರೆ ಮತ್ತು ಅಯ್ಯನಕೆರೆ ತುಂಬಿದರೆ ಮಾತ್ರ ವೇದಾನದಿ ಕಾಲುವೆ ಸೇರಿದಂತೆ ಇತರೆ ಕಾಲುವೆಗಳಲ್ಲಿ ನೀರು ಉಳಿದಂತೆ ಕೆರೆಯಲ್ಲಿ ನೀರು ಇಲ್ಲದಾಗ ಕಾಲುವೆಗಳಲ್ಲಿ ನೀರು ಹರಿಯುವುದಿಲ್ಲ.