'ವಿಜ್ಞಾನ ತಂತ್ರಜ್ಞಾನದಿಂದ ದೇಶದ ಪ್ರಗತಿ ಸಾಧ್ಯ'
ಶೃಂಗೇರಿ: ಪ್ರತಿಯೊಂದು ರಾಷ್ಟ್ರದ ಪ್ರಗತಿಯಲ್ಲಿ ವಿಜ್ಞಾನ, ತಂತ್ರಜ್ಞಾನಗಳು ಮಹತ್ತರ ಪಾತ್ರ ವಹಿಸುತ್ತದೆ ಎಂದು ಶೃಂಗೇರಿ ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಹೆಚ್.ಸಿ. ವೀರಪ್ಪಗೌಡ ತಿಳಿಸಿದರು.
ಅವರು ತಾಲೂಕಿನ ಮರ್ಕಲ್ ಪಂಚಾಯಿತಿ ಕಿಗ್ಗಾ ಶ್ರೀ ಅಭಿನವ ರಮಾನಂದ ಪ್ರೌಢಶಾಲಾ ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನಗಳು ಒಂದು ದೇಶದ ಅಭಿವೃದ್ಧಿಗೆ ಪೂರಕವಾಗಿರಬೇಕು. ವಿಜ್ಞಾನದ ಸದ್ಬಳಕೆಯಾಗಬೇಕೇ ಹೊರತು ದುರ್ಬಳಕೆಯಾಗಬಾರದು.ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಎನ್.ಹೆಚ್. ಲಕ್ಷ್ಮಿನಾರಾಯಣ ಜಲಮೂಲ ಸಂರಕ್ಷಣೆಯಲ್ಲಿ ಜನಸಾಮಾನ್ಯರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿ, ಕಲುಶಿತ ನೀರನ್ನು ಶುದ್ಧಗೊಳಿಸಬೇಕು. ಅಂದರೆ ನೀರನ್ನು ಕಲುಷಿತಗೊಳ್ಳದಂತೆ ತಡೆಗಟ್ಟಬೇಕು. ತ್ಯಾಜ್ಯ, ಮಲೀನ ವಸ್ತುಗಳು ನದಿ, ಜಲ ಮೂಲಗಳಿಗೆ ಸೇರದಂತೆ ತಡೆಗಟ್ಟಬೇಕು. ಜಲಮೂಲಗಳನ್ನು ರಕ್ಷಿಸಬೇಕು. ಇದರಿಂದ ಮುಂದಿನ ಪೀಳಿಗೆಗೆ ಶುದ್ಧ ಕುಡಿಯುವ ನೀರನ್ನು ನೀಡಬಹುದು ಎಂದರು.
ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡಿದ್ದ ಅಗಲಿ ನಾಗೇಶ್‌ವ್ ವಿಜ್ಞಾನದ ಅವಶ್ಯಕತೆ ಕುರಿತು ಮಾತನಾಡಿದರು. ಅಬಿಜಿತ್ ಮಲೆನಾಡಿನಲ್ಲಿ ಕಂಡುಬರುವ ಪಕ್ಷಿಸಂಕುಲಗಳು, ಅವುಗಳ ರಚನೆ, ಪರಿಚಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿಜ್ಞಾನ ವಸ್ತು ಪ್ರದರ್ಶನ, ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ, ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಶಾಂತ್ ಪ್ರಾಸಾತಾವಿಕ ಮಾತನಾಡಿದರು.