ಶಿಬಿರಗಳು ಸಂಸ್ಕೃತಿ, ಸಂಪ್ರದಾಯ ತಿಳಿಯಲು ಸಹಕಾರಿ: ರಂಗಪ್ಪಯ್ಯ
ನರಸಿಂಹರಾಜಪುರ: ಎನ್ಎಸ್ಎಸ್ ಶಿಬಿರ ನಡೆಸುವುದರಿಂದ ಗ್ರಾಮೀಣ ಭಾಗದ ಸಂಸ್ಕೃತಿ, ಸಂಪ್ರದಾಯಗಳನ್ನು ಅರಿತುಕೊಳ್ಳಲು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ ಎಂದು ಕಾನೂರು ಗ್ರಾಮದ ಮುಖಂಡ ಕೆ. ರಂಗಪ್ಪಯ್ಯ ತಿಳಿಸಿದರು.
ಗುರುವಾರ ಕಾನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರಸಿಂಹರಾಜಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಎನ್ಎಸ್ಎಸ್ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ಕೆ. ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕೃಷಿ ಸಂಸ್ಕೃತಿಯನ್ನು ಪರಿಚಯಿಸಲು ಹಾಗೂ ಕೃಷಿಕರೊಂದಿಗೆ ಬೆರೆತು ಅವರ ಜೀವನ ಶೈಲಿ, ಸಂಪ್ರದಾಯವನ್ನು ಅರಿತುಕೊಂಡು ಅನುಭವ ಪಡೆದುಕೊಳ್ಳಲಿ ಎಂಬ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಎನ್ಎಸ್ಎಸ್ ಶಿಬಿರವನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಮತ್ತೊಬ್ಬ ಶಿಬಿರಾಧಿಕಾರಿ ಪ್ರೊ. ಮುಜೀಬ್ ಖಾನ್ ಮಾತನಾಡಿ, ಎನ್ಎಸ್ಎಸ್ನಿಂದ ನಾಯಕತ್ವ ಗುಣ ಬೆಳೆಯಲಿದೆ. ಹಿರಿಯ ಶಿಬಿರಾರ್ಥಿಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ಮಾಹಿತಿ ಪಡೆದು ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ. ಪೂರ್ಣೇಶ್ ಮಾತನಾಡಿ, ದೂರದರ್ಶನದ ಪ್ರಭಾವ ಹಾಗೂ ಕುಟುಂಬಗಳು ಸಣ್ಣಗಾಗಿರುವ ಪರಿಣಾಮದಿಂದಾಗಿ ಮಕ್ಕಳಲ್ಲಿ ಪರಸ್ಪರ ಹೊಂದಾಣಿಕೆ ಸ್ವಭಾವ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದ ಜನರಿಂದಲೇ ಪಟ್ಟಣದ ಜನರು ಕಲಿಯುವುದು ಬಹಳ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಿಶ್ವನಾಥ್, ಗ್ರಾಮದ ಮುಖಂಡರಾದ ರಾಜಶೇಖರ್, ವಾಸುದೇವ, ಸದಾನಂದಗೌಡ, ಗೋಪಾಲ್, ಶಾಲೆಯ ಮುಖ್ಯೋಪಾಧ್ಯಾಯ ಬಿ.ಅಣ್ಣಪ್ಪ ಉಪಸ್ಥಿತರಿದ್ದರು.