ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಆದ್ಯತೆ: ದತ್ತ
ಕಡೂರು: ಕ್ಷೇತ್ರದ ಗಂಗಾಮತಸ್ಥ, ವಿಶ್ವಕರ್ಮ ಸೇರಿದಂತೆ ಮತ್ತಿತರ ಹಿಂದುಳಿದ ವರ್ಗದ ಎಲ್ಲ ಜನಾಂಗಗಳ ಅಭಿವೃದ್ಧಿಗೆ ದುಡಿಯಲು ಸಿದ್ಧರಿದ್ದು, ಸಮುದಾಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ವೈ.ಎಸ್.ವಿ. ದತ್ತ ಹೇಳಿದರು.
ಪಟ್ಟಣದ ಛತ್ರದ ಬೀದಿಯ ಬೆಂಕಿ ಕಾಲೋನಿಯಲ್ಲಿ ಗಂಗಾಮತಸ್ಥ ಸಮಾಜದ ಸಮುದಾಯ ಭವನಕ್ಕೆ ಮತ್ತು ಶ್ರೀ ಕಾಳಿಕಾಂಬ ದೇವಾಲಯದ ಪಕ್ಕದಲ್ಲಿ ವಿಶ್ವಕರ್ಮ ಸಮಾಜದ ಸಮುದಾಯ ಭವನ ಸೇರಿದಂತೆ 4 ಲಕ್ಷ ವೆಚ್ಚದಲ್ಲಿ ಭವನಗಳ ಮುಂದುವರಿದ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಶಾಸಕರಾಗಿ ಕೇವಲ ಎಂಟು ತಿಂಗಳು ಮಾತ್ರ ಕಳೆದಿದೆ. ಚುನಾವಣೆ ಸಮಯದಲ್ಲಿ ಹಿಂದುಳಿದ ಜಾತಿಗಳಿಗೆ ತಾವು ನೀಡಿದ ಭರವಸೆಯಂತೆ ಸಮುದಾಯ ಭವನಗಳ ನಿರ್ಮಾಣ ಮತ್ತು ಸರ್ಕಾರದಿಂದ ದೊರಕಬೇಕಾಗಿರುವ ಮೂಲ ಸವಲತ್ತುಗಳನ್ನು ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಅದರಂತೆ ಗಂಗಾಮತಸ್ಥ ಸಮಾಜದ ಸಮುದಾಯದ ಭವನ ನಿರ್ಮಾಣಕ್ಕೆ 2 ಲಕ್ಷ ಹಾಗೂ ವಿಶ್ವಕರ್ಮ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ತಲಾ 2 ಲಕ್ಷದಂತೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸಮಾಜದ ದೇವಾಲಯ ಮತು ಭವನಗಳ ಅಭಿವೃದ್ಧಿಗೆ ತಾವು ಸರ್ಕಾರದಿಂದ ಸವಲತ್ತು ಮತು ಹೆಚ್ಚಿನ ಅನುದಾನ ತಂದು ನೀಡುವುದಾಗಿ ಭರವಸೆ ನೀಡಿದರು.
ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಹಿಂದುಳಿದ ಜಾತಿಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ದತ್ತರವರ ಮೇಲೆ ಮಂದೆಯೂ ತಾವೆಲ್ಲರೂ ಬೆಂಬಲಿಸಿ ಸಹಕರಿಸಬೇಕು. ತಾವೂ ಕೂಡ ಸಂಘಟಿತರಾಗಬೇಕು. ಇದಕ್ಕೆ ಪಕ್ಷವು ಸದಾ ನಿಮ್ಮ ಜೊತೆಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಕೆ.ಎಚ್. ಲಕ್ಕಣ್ಣ, ವೈ.ಎಸ್. ರವಿಪ್ರಕಾಶ್, ತಮ್ಮಯ್ಯ, ಗಂಗಾಮತಸ್ಥ ಯುವಕ ಸಂಘದ ಅಧ್ಯಕ್ಷ ರೇಣುಕಾಮೂರ್ತಿ, ಕಾರ್ಯದರ್ಶಿ ಕೃಷ್ಣಮೂರ್ತಿ, ಮುಖಂಡರಾದ ಮಂಜುನಾಥ್, ರಾಜು, ತಿಮ್ಮಯ್ಯ, ಶಿವಣ್ಣ, ಕೆ.ಎಲ್. ಮನೋಹರ್, ಕೃಷ್ಣ, ವಿಶ್ವಕರ್ಮ ಸಮಾಜದ ಮುಖಂಡರಾದ ಕೃಷ್ಣಮೂರ್ತಿ, ಪ್ರಭಾಕರ್, ಎನ್.ಬಿ. ಮಂಜುನಾಥ್, ನಟರಾಜ್ ಸೇರಿದಂತೆ ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.