'ಅಪರಾಧಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಅಸಾಧ್ಯ'
ಕ.ಪ್ರ.ವಾರ್ತೆ, ಕಡೂರು, ಫೆ.21 ಕಾನೂನು ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದು, ಅಪರಾಧಿ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಕಾನೂನಿಂದ ತಪ್ಪಿಸಿಕೊಳ್ಳಲು ಅಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಹೇಳಿದರು.
ಅವರು ಕಡೂರು ತಾಲೂಕು ಮಲ್ಲಾಘಟ್ಟದಲ್ಲಿ ಸವರ್ಣೀಯರು ದಲಿತರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಹಲ್ಲೆಗೆ ಒಳಗಾದವರನ್ನು ಕಡೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
17 ಬಂಧನ: ಪಂಚನಹಳ್ಳಿ ವ್ಯಾಪ್ತಿಯ ಜಿ. ವಡ್ಡರಹಟ್ಟಿಯಲ್ಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 17 ಜನರನ್ನು ಬಂಧಿಸಲಾಗಿದೆ. ಮಲ್ಲಾಘಟ್ಟದ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ನೀಡುವ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ಚಿಕಿತ್ಸೆಗಾಗಿ ಹಣ ನೀಡುವಂತೆ ಇಲಾಖೆಗೂ ಸೂಚಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ದಲಿತರಿಗೆ ರಕ್ಷಣೆ ನೀಡಲಾಗುತ್ತಿದ್ದು, ಸಖರಾಯಪಟ್ಟಣದ ದಲಿತ ಸಂಘಟನೆಗಳು ಗುರುವಾರ ಚಿಕ್ಕಮಗಳೂರು ಎಸ್.ಪಿ.ಕಚೇರಿ ಮುಂದೆ ಪ್ರತಿಭಟನೆ ನಡೆಸುವ ವೇಳೆ ತಾವು ಕಚೇರಿಯಲ್ಲಿ ಸಭೆ ನಡೆಸುತ್ತಿದ್ದರೂ ಕೂಡ ಪ್ರತಿಭಟನಾಕಾರರನ್ನು ಕರೆಸಿಕೊಂಡು ಬರುವಂತೆ ಸೂಚಿಸಿದೆ.
ಆದರೆ ಅವರು ಕೆಳಗೆ ಬಂದು ನಮ್ಮನ್ನು ಮಾತನಾಡಿಸದೆ ಕಲ್ಲಿಗೆ ಮನವಿ ಸಲ್ಲಿಸಿದ್ದು ಬೇಸರವಾಯಿತು ಎಂದರು.
ಮುಕ್ತ ಆವಕಾಶ: ಯಾವುದೇ ವ್ಯಕ್ತಿ ತಮ್ಮ ಸಮಸ್ಯೆ ತೋಡಿಕೊಳ್ಳಲು ಮುಕ್ತ ಅವಕಾಶವಿದ್ದು, ಸರಿಯಾದ ರೀತಿಯಲ್ಲಿ ಮಾಹಿತಿ ನೀಡಿ ಭೇಟಿ ಮಾಡಿ ಮುಕ್ತವಾಗಿ ಸಮಸ್ಯೆ ಬಗ್ಗೆ ಚರ್ಚಿಸಲು ಎಲ್ಲರಿಗೂ ಅವಕಾಶವಿದೆ ಎಂದರು.
ಕಡೂರು ವೃತ್ತ ನಿರೀಕ್ಷಕ ಮಧುಸೂಧನ್, ಸಿಂಗಟಗೆರೆ ಸಬ್ ಇನ್ಸ್‌ಪೆಕ್ಟರ್ ಲೋಹಾರ್, ದಸಂಸ ತಾಲೂಕು ಸಂಚಾಲಕ ಶೂದ್ರ ಶ್ರೀನಿವಾಸ್, ರಂಗಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.