ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಆಡುಭಾಷೆಯಿಂದಲೇ ಕನ್ನಡ ಜೀವಂತ

Lingaraj Badiger
Updated On : 22 Feb 2014, 11:02 am

ಕ.ಪ್ರ.ವಾರ್ತೆ  ಬೀರೂರು  ಫೆ. 21
ಸತ್ವ ಕಳೆದುಕೊಳ್ಳುತ್ತಿರುವ ಕನ್ನಡ ಭಾಷೆಗೆ ಜೀವಂತಿಕೆ ತುಂಬುತ್ತಿರುವುದು ಗ್ರಾಮೀಣ ಜನಪದ ಸೊಗಡಿನ ಆಡುಭಾಷೆ.
 ಈ ದಿಸೆಯಲ್ಲಿ ಗ್ರಾಮೀಣ ಭಾಗದ ಕಾಲೇಜು ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿ ತಮ್ಮ ಕಲಿಕೆ ಜೊತೆ ಭಾಷಾಭಿಮಾನ ಬೆಳೆಸಿಕೊಂಡು ಭಾಷಾ ಹಿರಿಮೆಯನ್ನು ಹೆಚ್ಚಿಸಬೇಕು ಎಂದು ಕನ್ನಡ ಅಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಡೂರು ತಾಲೂಕು ಕಸಾಪ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೋವಿನ ಸಂಗತಿ: ಭಾಷಾವಾರು ಪ್ರಾಂತ್ಯ ರಚನೆಯಾಗಿ 56 ವರ್ಷ ಕಳೆದರೂ ಕನ್ನಡ ಉಳಿಸಿ ಎಂದು ಬೇಡುವ ಸ್ಥಿತಿ ಬಂದಿರುವುದು ನೋವಿನ ಸಂಗತಿಯಾಗಿದೆ.
ನಮಗೆ ನಾವೆ ಈ ಬಗ್ಗೆ ಆತ್ಮವಲೋಕನ ಮಾಡಿಕೊಳ್ಳಬೇಕಿದೆ.  ಭಾಷೆ ಒಂದು ಉತ್ತಮ ಬದುಕಿನ, ಸಂಸ್ಕೃತಿಯ ಸಂಸ್ಕಾರದ ಪ್ರತಿಬಿಂಬದಂತಿದ್ದು, ಕನ್ನಡದ ಸೊಗಡು ಅಪಾರವಾಗಿದ್ದರೂ, ನಮ್ಮ ಭಾಷೆಯ ಪ್ರಗತಿಗೆ ನಾವೇ ತೊಡಕಾಗಿ ಪರಿಣಮಿಸುತ್ತಿರುವುದು ನಿಜಕ್ಕೂ ಚಿಂತಿಸಬೇಕಾಗಿದೆ ಎಂದರು.
ಕನ್ನಡಿಗರ ಸಹೃದಯತೆ, ಸರಳತೆ, ಆತ್ಮೀಯತೆಯ ಗುಣಗಳನ್ನು ಬೇರೆ ಭಾಷಿಕರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲಾಗುತ್ತಿದ್ದರೂ, ಸುಮ್ಮನಿರುವ ಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆ  ಎಂದು ಎಚ್ಚರಿಸಿದರು.
ಕನ್ನಡ ಜಾಗೃತಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿವಿಧ ಸರ್ಕಾರಿ ಹಾಗೂ ಉನ್ನತ ಹಂತದ ಕಚೇರಿಗಳಲ್ಲಿ ಕನ್ನಡ ಬಳಸದ ಅಧಿಕಾರಿಗಳ ವಿರುದ್ಧ ಛೀಮಾರಿ ಹಾಕುವುದರ ಜೋತೆ ನಾಮಫಲಕ ಬದಲಾವಣೆಗೆ ಕನ್ನಡ ಬಳಕೆಯ ಜಾಗೃತಿ ಮಾಡಿಸುತ್ತಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಎಷ್ಟೇ ಉನ್ನತ ವ್ಯಾಸಂಗ ಮಾಡಿ ಪದವಿ ಉದ್ಯೋಗ ಪಡೆದರೂ, ಆಂಗ್ಲ ವ್ಯಾಮೋಹಕ್ಕೆ ಒಳಗಾಗದೆ ಮಾತೃ ಭಾಷೆಯ ಋಣ ಹೆಚ್ಚು ಎಂಬುದನ್ನು ಅರಿತು ಮುಂದಿನ ಪೀಳೀಗೆಗೆ ಉತ್ತಮ ಕನ್ನಡ  ಉಳಿಸಿ ಹೋಗುವ ಸಂಕಲ್ಪ ಮಾಡಿ ಎಂದು ಕರೆ ನೀಡಿದರು.
ಉಪನ್ಯಾಸ ನೀಡಿದ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಡಾ. ದೊರೇಶ್, ಇಂದು ಕನ್ನಡದ ಉಳಿವಿನ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾಷೆ ಪ್ರಗತಿಯ ಉಳಿವಿಗಾಗಿನ ಆರೋಗ್ಯಕರ ಚರ್ಚೆಗಳ ಅಗತ್ಯತೆ ಹೆಚ್ಚಾಗ ಬೇಕಿದೆ ಎಂದರು.
ತಪ್ಪು ದಾರಿಗೆ ಎಳೆಯುವುದು ಸಲ್ಲ: ಬರೀ ಕನ್ನಡ ಉಳಿವಿನ ನೆಪದಲ್ಲಿ ಜೋಳಿಗೆ ತುಂಬಿಕೊಳ್ಳುವ ಜನರನ್ನು ತಪ್ಪುದಾರಿಗೆ ತರುವ ಪ್ರಯತ್ನಗಳಿಗೆ ಕಡಿವಾಣ ಹಾಕಿ ಉತ್ತಮ ರೀತಿಯ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಭಾಷಾ ಜಾಗೃತಿ ಮೂಡಿಸುವಂತೆ ಮಾಡಬೇಕಿದೆ ಎಂದರು.
ಆಶಯ ನುಡಿಗಳನ್ನಾಡಿದ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಭಾಷಾ ಸೊಗಡು  ಗ್ರಾಮೀಣರಲ್ಲಿ ಉಳಿದಿದೆಯೇ ಹೊರತು, ಮಹಾನಗರಗಳಲ್ಲಲ್ಲ.
 ಕನ್ನಡಿಗರ ಅಳಿವು ಉಳಿವು ಕನ್ನಡಿಗರ ಕೈಯಲ್ಲಿದೆ. ನಮಗೆ ನಾವೆ ತೊಡಕಾಗುವುದು ಬೇಡ. ವಿದ್ಯಾವಂತರಾದವರು ಭಾಷೆ, ಸಂಸ್ಕೃತಿ ಮರೆತು ಪ್ರಗತಿಯ ನೆಪದಲ್ಲಿ ವೃದ್ಧಾಶ್ರಮ ಹೆಚ್ಚಿಸುತ್ತಿರುವುದು ನೊವಿನ ಸಂಗತಿ ಎಂದರು.
ಕಾಲೇಜು ಪ್ರಾಂಶುಪಾಲರಾದ ಗ್ಲಾಸಿಯಸ್ ಡಿ. ಸೋಜಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಮುರಳೀಧರ್ ಉಪಸ್ಥಿತರಿದ್ದರು. ಎಸ್. ಅರುಣ್ ಸ್ವಾಗತಿಸಿದರು. ಪ್ರಸಾದ್ ವಂದಿಸಿದರು.

'ಸಂಭಾಜಿ ವಿರುದ್ಧ ಕಠಿಣ ನಿಲುವು ಅಗತ್ಯ'
ಕ.ಪ್ರ.ವಾರ್ತೆ, ಕಡೂರು, ಫೆ.21 ಕನ್ನಡಿಗರ ಹಾಗೂ ಕರ್ನಾಟಕದ ಮೇಲೆ ಕತ್ತಿ ಮಸೆಯುವ ಹೇಳಿಕೆ ನೀಡಿದ ಎಂ.ಇ.ಎಸ್. ಶಾಸಕ ಸಂಭಾಜಿ ಪಾಟೀಲ್ ಬಗ್ಗೆ ಸರ್ಕಾರವೇ ಕಠಿಣ ಕ್ರಮಕ್ಕೆ ಮುಂದಾಗುವ ಮೂಲಕ ಹಕ್ಕುಚ್ಯುತಿ ಮಂಡನೆ, ಕ್ರಿಮಿನಲ್ ಮೊಕದ್ದಮೆ ಹೂಡುವ ಇಲ್ಲವೇ ಸದನದಿಂದ ಹೊರ ಹಾಕುವ ನಿರ್ಧಾರ ಕೈಗೊಳ್ಳಬೇಕು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಹಾಗೂ ಕನ್ನಡ ಭವನಗಳ ವೀಕ್ಷಣೆಗಾಗಿ ಪ್ರವಾಸ ಮಾಡಿ ಕಡೂರಿಗೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕಡಿವಾಣ ಅಗತ್ಯ: ಕರ್ನಾಟಕದಲ್ಲಿ ಬೇರೆ ಭಾಷಿಕರ ಪ್ರಾಬಲ್ಯ ಹೆಚ್ಚಾಗಿ ಕನ್ನಡಿಗರ ಪ್ರಬಲತೆ ಕುಂದಿಸುವಂತಹ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಕರ್ನಾಟಕದಲ್ಲಿ 6.20 ಕೋಟಿ ಜನಸಂಖ್ಯೆಯಿದ್ದು ಅದರಲ್ಲಿ ಸುಮಾರು 1 ಕೋಟಿ ಜನ ಬೆಂಗಳೂರಲ್ಲಿದ್ದಾರೆ. ಅದರಲ್ಲಿ ಶೇ. 50 ಬೇರೆ ಬೇರೆ ಭಾಷಿಗರಿದ್ದು ಕನ್ನಡಕ್ಕೆ ಕುತ್ತು ಬಂದಿದೆ ಎಂದರು.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಕನ್ನಡ ಭಾಷೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುವ ಉದ್ದೇಶದಿಂದ ಕಾಲೇಜಿನಲ್ಲಿ ಕನ್ನಡ, ಪ್ರಾಚೀನ ಕನ್ನಡ ಕಾವ್ಯ ಕಮ್ಮಟ, ಪತ್ರಿಕೋದ್ಯಮಕ್ಕೆ ಬರುವ ಕಿರಿಯರು, ಹಿರಿಯರಿಗಾಗಿ ಕಾರ್ಯಾಗಾರ ನಡೆಸುತ್ತಾ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.  
ಕನ್ನಡ ಭವನ: ಪ್ರಾಧಿಕಾರದಿಂದ ಸುಮಾರು ರು. 2.50 ಕೋಟಿರೂ ವೆಚ್ಚದಲ್ಲಿ ರಾಜ್ಯದ 38 ಕಡೆ ಕನ್ನಡ ಭವನ ನಿರ್ಮಾಣ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಭವನಕ್ಕೆ ರು. 5 ಲಕ್ಷ, ಕೊಪ್ಪ ಮತ್ತು ಶೃಂಗೇರಿಗೆ ತಲಾ ರು.  10 ಲಕ್ಷ ಮತ್ತು ಶಿವಮೊಗ್ಗ ಜಿಲ್ಲೆಯ ಸೊರಬ, ತೀರ್ಥಹಳ್ಳಿ ಹಾಗೂ ಸಾಗರದ ಭವನಗಳಿಗಾಗಿ ತಲಾ ರು. 10 ಲಕ್ಷ ನೀಡಲಾಗಿದೆ ಎಂದರು.
ನನ್ನ ಮನಸ್ಥಿತಿಗೆ ಇಂದಿನ ರಾಜಕಾರಣ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ತಾವು ರಾಜಕಾರಣದಿಂದ ದೂರ ಸರಿಯುತ್ತಿದ್ದು, ಮುಂದೆ ಉತ್ತಮ ರಾಜಕೀಯ ವಾತಾವರಣವಿದ್ದಲ್ಲಿ ಮಾತ್ರ ರಾಜಕಿಯಕ್ಕೆ ಬರುತ್ತೇನೆಯೇ ಹೊರತು ಉಳಿದಂತೆ ನನ್ನ ಬಣ್ಣ ಹಚ್ಚುವ ಕಾರ್ಯ ಮುಂದುವರಿಯುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.
ಕಡೂರು ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ನಿಂಗೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement