ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ: ಚೈತನ್ಯ
ಬಾಳೆಹೊನ್ನೂರು: ಪರೀಕ್ಷೆಗಳು ಸಮೀಪಿಸುತ್ತಿರುವ ಈ ದಿನಗಳಲ್ಲಿ ವಿದ್ಯಾರ್ಥಿಗಳು ತಮ್ಮ ಭಯ, ಹಿಂಜರಿಕೆಯನ್ನು ದೂರವಿರಿಸಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಬೇಕು ಎಂದು ಜೇಸಿ ವಲಯ 14ರ ತರಬೇತುದಾರ ಚೈತನ್ಯ ವೆಂಕಿ ಹೇಳಿದ್ದಾರೆ.
ಇಲ್ಲಿನ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯು ಸಮೀಪದ ರಂಭಾಪುರಿ ಪೀಠದ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಪರೀಕ್ಷಾ ಸಮಯದಲ್ಲಿ ಒತ್ತಡ ನಿರ್ವಹಿಸುವುದು ಹೇಗೆ ಎಂಬ ವಿಷಯದ ಕುರಿತು ಅವರು ತರಬೇತಿ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅಂಕಗಳಿಕೆಯೊಂದೇ ಉದ್ದೇಶವಾಗಿರದೆ, ತಮ್ಮ ಭವಿಷ್ಯದ ದಿನಗಳ ಕನಸು ಹೊತ್ತು ಪರೀಕ್ಷೆಯನ್ನು ಎದುರಿಸಬೇಕು. ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಹೆಚ್ಚು ಅಂಕ ಪಡೆಯುವಂತೆ ಅವರಿಗೆ ಒತ್ತಡ ಹೇರದೆ ಲಕ್ಷ್ಯ ವಹಿಸಿ ಓದುವಂತೆ ಪ್ರೋತ್ಸಾಹಿಸಬೇಕು. ಪರೀಕ್ಷೆ ಸಮೀಪಿಸುತ್ತಿರುವ ಈ ದಿನಗಳಲ್ಲಿ ಬೇರೆ ಚಟುವಟಿಕೆಗಳತ್ತ ಹೆಚ್ಚು ಗಮನಹರಿಸದೇ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸುವತ್ತ ಗಮನಹರಿಸಬೇಕು ಎಂದರು.
ಸಮಯ ನಿರ್ವಹಣೆ ಮುಖ್ಯ: ವಲಯ ತರಬೇತುದಾರ ಸೈಯ್ಯದ್ ಫಾಜಿಲ್ ಹುಸೇನ್ ಸಮಯ ನಿರ್ವಹಣೆ ಕುರಿತು ತರಬೇತಿ ನೀಡಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರಮುಖವಾಗಿ ಶಿಸ್ತುಬದ್ಧತೆ, ಸಮಯ ನಿರ್ವಹಣೆ, ಚುರುಕುತನ, ಸಾಧನೆಯ ಗುರಿ ಇರಬೇಕು. ಅತೀ ಸಣ್ಣ ವಯಸ್ಸಿನಲ್ಲಿಯೇ ಸಮಯ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡುವ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಪಿ.ಆರ್. ಸದಾನಂದ ಮಾತನಾಡಿದರು. ಜೇಸಿ ಅಧ್ಯಕ್ಷ ಕೆ.ಎಸ್. ಜಗದೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್. ಸಚಿನ್‌ಕುಮಾರ್, ಕಾರ್ಯಕ್ರಮ ಪ್ರಾಯೋಜಕ ಕಾಫಿ ಬೆಳೆಗಾರ ಎಂ.ಸಿ. ಯೋಗೀಶ್ ಹೂವಿನಹಕ್ಲು, ಸಂಸ್ಥೆಯ ಉಪಾಧ್ಯಕ್ಷ ದಯಾಕರ್ ನಾ. ಸುವರ್ಣ, ನಿರ್ದೇಶಕ ರಿಚರ್ಡ್ ಮಥಾಯಿಸ್, ಶಿಕ್ಷಕರಾದ ಕಟ್ಟೇಗೌಡ, ಮಧುಶ್ರೀ, ಸುಜಾತ ಅಳವಂಡಿ ಉಪಸ್ಥಿತರಿದ್ದರು.