ಕಾಮಗಾರಿಗಳ ಮೇಲೆ ನಿಗಾ ಇಡಲು ಸೂಚನೆ
ಚಿಕ್ಕಮಗಳೂರು: ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಗಾ ಇಡುವಂತೆ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಅವರು ನಗರಸಭಾ ಆಯುಕ್ತರಿಗೆ ಸೂಚನೆ ನೀಡಿದರು.
ನಗರೋತ್ಥಾನ, ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ, ಕೆ.ಎಂ.ಆರ್.ಪಿ. ಯೋಜನೆಯಡಿ ರಸ್ತೆ, ಮಳೆ ಚರಂಡಿ, ಒಳ ಚರಂಡಿ ಕಾಮಗಾರಿಗಳು ನಡೆಯುತ್ತಿದ್ದು, ಜಿಲ್ಲಾಧಿಕಾರಿಯವರು ಶುಕ್ರವಾರ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.
ಗುಣಮಟ್ಟ ಕಾಯ್ದುಕೊಳ್ಳಿ: ಒಳ ಚರಂಡಿ ಕಾಮಗಾರಿಯಡಿಯಲ್ಲಿ ಚೇಂಬರ್ ನಿರ್ಮಾಣ ಮಾಡಲಾಗುತ್ತಿದ್ದು, ಅವುಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿಗಳು ಚೇಂಬರ್ ನಿರ್ಮಾಣ ಮಾಡಿದ ಮೇಲೆ ಅವುಗಳಿಗೆ ನೀರು ಹಾಕಿ ಕ್ಯೂರಿಂಗ್ ಮಾಡಬೇಕು. ಇಲ್ಲದೆ ಹೋದರೆ ಅವುಗಳು ಹೆಚ್ಚು ದಿನ ಬಾಳಿಕೆ ಬರುವುದಿಲ್ಲ. ಆದುದರಿಂದ ಅವುಗಳ ಮೇಲೆ ನಿಗಾ ಇಡಬೇಕು.
ಗುಣಮಟ್ಟದ ಕಾಮಗಾರಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಕಾಮಗಾರಿಗಳ ಪ್ರಗತಿಯ ಬಗ್ಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮಳೆ ಆರಂಭಗೊಂಡರೆ ಕಾಮಗಾರಿ ಮುಂದುವರೆಸಲು ಆಗುವುದಿಲ್ಲ. ಆದುದರಿಂದ ಕಾಮಗಾರಿಗಳು ಚುರುಕಾಗಿ ನಡೆಯಬೇಕು. ಕಾಮಗಾರಿಗಳ ಮೇಲೆ ನಿಗಾ ಇಡದೇ ಹೋದರೆ ಸರ್ಕಾರದ ಹಣ ಬಳಕೆ ಮಾಡಿದಂತೆ ಆಗುವುದಿಲ್ಲ. ಕಾಮಗಾರಿಗಳ ಬಗ್ಗೆ ಆಗಾಗ ತಮಗೆ ವರದಿ ನೀಡುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭಾ ಆಯುಕ್ತ ನಾಗಭೂಷಣ್ ಹಾಗೂ ಅಧಿಕಾರಿಗಳು ಹಾಜರಿದ್ದರು.