ಶಿಕ್ಷಣವೆಂದರೆ ಬರಿ ಅಕ್ಷರ ಕಲಿಕೆಯಲ್ಲ
ಕ.ಪ್ರ. ವಾರ್ತೆ, ಬೀರೂರು, ಫೆ.22
ಶಿಕ್ಷಣ ಎಂದರೆ ಬರೀ ಅಕ್ಷರ ಕಲಿಕೆ ಅಷ್ಟೆ ಅಲ್ಲ, ಕ್ರೀಡೆ, ಕಲೆ, ಯೋಗ, ಸಾಮಾಜಿಕ ಸನ್ನಡತೆಯ ಮಾಹಿತಿ ಎಲ್ಲವು ಒಳಗೊಂಡಿದೆ. ಯೋಗ್ಯ ಶಿಕ್ಷಣಕ್ಕೆ ದೈಹಿಕ ಕಾರ್ಯಕ್ಷಮತೆಯು ಅಷ್ಟೆ ಮುಖ್ಯವಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರವು ಬಲು ದೊಡ್ಡದಿದೆ ಎಂದು ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಇಲ್ಲಿನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಗುರುಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಇಲಾಖೆ ನಿಮ್ಮ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದರೂ ನಿಮಗೆ ಸಿಗಬೇಕಾದ ವೃಂದ ಬದಲಾವಣೆ, ಬಡ್ತಿ ಅವಕಾಶ ಸೇರಿದಂತೆ ಹಲವಾರು ಸಮಸ್ಯೆಗಳು ಹಾಗೆಯೇ ಮುದುವರಿದುಕೊಂಡು ಬಂದಿವೆ. ಲೋಕಸಭೆಯಲ್ಲೂ ನಾನು ದೈಹಿಕ ಶಿಕ್ಷಣದ ಬಗೆಗೆ ಪ್ರಸ್ತಾಪಿಸಿದ್ದು, ಇಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರೊಂದಿಗೆ ಚರ್ಚಿಸಿ ನಿಮಗೆ ಸಿಗಬೇಕಾದ ಸೌಲಭ್ಯ ದೊರಕುವಲ್ಲಿ ಶ್ರಮಿಸುತ್ತೇನೆ ಎಂಬ ಭರವಸೆ ನೀಡಿದರು.
ಅನ್ಯಾಯ: ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಹೋರಾಟ ಸಮಿತಿಯ ಅಧ್ಯಕ್ಷ ಶಿವಲಿಂಗೇಗೌಡ ಮಾತನಾಡಿ, ಪ್ರಾಥಮಿಕ ಹಂತದ ದೈಹಿಕ ಶಿಕ್ಷಕರಿಂದ ಹಿಡಿದು ವಿಶ್ವವಿದ್ಯಾನಿಲಯದವರೆಗೆ ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಮರ್ಪಕ ಸ್ಥಾನಮಾನದ ಅವಕಾಶ ದೊರಕುತ್ತಿಲ್ಲ. ಶಿಕ್ಷಣ ಮಂತ್ರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದ್ದು, ಸಹ ಶಿಕ್ಷಕರ ಸ್ಥಾನದ ಮಾನ್ಯತೆ ದೊರಕಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಪರಿಹಾರ ಸಿಕ್ಕಿಲ್ಲ: ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಲಕ್ಷ್ಮಣ್, 6 ರಿಂದ 9ನೇ ತರಗತಿ ಮಕ್ಕಳಿಗೆ ನೂರು ಅಂಕಗಳಿಗೆ ದೈಹಿಕ ಶಿಕ್ಷಣದ ಪಾಠದ ಪಠ್ಯ ಪುಸ್ತಕ ರಚಿಸಿ ಪರೀಕ್ಷೆ ನಡೆಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಮಕ್ಕಳಿಗೂ ವಿಸ್ತರಿಸಬೇಕೆಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಪ್ಪ ಮಾತನಾಡಿ, ಸಹ ಶಿಕ್ಷಕರಾದ ನಂತರ ನಿಮ್ಮ ಜವಾಬ್ದಾರಿಯೂ ಹೆಚ್ಚುತ್ತಿದ್ದು, ಅದನ್ನು ನಿರ್ವಹಿಸಲು ನೀವೂ ಸಿದ್ಧರಾಗಬೇಕಿದೆ ಎಂದರು.
ತಾಪಂ ಅಧ್ಯಕ್ಷ ಬಸವರಾಜಪ್ಪ, ದೈಹಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಎಸ್.ಟಿ. ಕಾಗಲೆ, ಜಿಲ್ಲಾ ಡಯಟ್ ಉಪ ನಿರ್ದೇಶಕ ಬಸವೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಜಿಪಂ ಅಧ್ಯಕ್ಷೆ ಪದ್ಮ ಚಂದ್ರಪ್ಪ ಮಾತನಾಡಿದರು. ಜಿಪಂ ಸದಸ್ಯ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಇಲಾಖೆಯ ಎಂ. ಮಲ್ಲಪ್ಪ, ಸಮನ್ವಯಧಿಕಾರಿ ಪ್ರಕಾಶ್, ಭಕ್ತವತ್ಸಲಂ, ಜಿ.ದೈ,ಶಿ.ಸ. ಷಡಾಕ್ಷರಿ, ಜಿಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ, ಶೋಭಾ ವೆಂಕಟೇಶ್, ಗೌರಮ್ಮ ನಾಗರಾಜ್, ಬಿ.ಎನ್. ಕುಮಾರಸ್ವಾಮಿ, ಪರಮೇಶ್ವರಪ್ಪ, ಕುಮಾರ್ ಇದ್ದರು. ರಾಷ್ಟ್ರೀಯ ಮಟ್ಟದ ಯೋಗ ಕ್ರೀಡಾಪಟು ಕುಸುಮ ಅವರ ಯೋಗ ಪ್ರದರ್ಶನ ಸಭೆಯ ಗಮನ ಸೆಳೆಯಿತು. ಜಿಲ್ಲೆಯಿಂದ ರಾಷ್ಟ್ರಮಟ್ಟದವರೆಗೆ ಪ್ರತಿನಿಧಿಸಿದ್ದ ಮಕ್ಕಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಊರಿನ ವೀರಭದ್ರಸ್ವಾಮಿ ದೇವಾಲಯದಿಂದ ಗುರುಭವನದವರೆಗೆ ಮಕ್ಕಳಿಂದ ಪೂರ್ಣಕುಂಭ ಮೆರವಣಿಗೆ ಹಾಗೂ ವೀರಗಾಸೆ, ಗೊಂಬೆ ಮೇಳ ಹಾಗೂ ಶಿಕ್ಷಕರ ಮೆರವಣಿಗೆ ನಡೆಯಿತು.