ಅಭಿವೃದ್ಧಿಗೆ ಸಮನ್ವಯ ಅಗತ್ಯ: ಶಾಸಕ ನಿಂಗಯ್ಯ
ಮೂಡಿಗೆರೆ: ಸರ್ಕಾರದ ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಜನಪ್ರತಿನಿಧಿಗಳ ನಡುವೆ ಸಮನ್ವಯತೆ ಅತ್ಯಗತ್ಯ ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದರು.
ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೆಗದ್ದೆ ಗ್ರಾಮದಲ್ಲಿ ವಿವಿಧ ಕಟ್ಟಡಗಳನ್ನು ಉದ್ಘಾಟಿಸಿ ಬಳಿಕ ಮಾತನಾಡಿ, ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ನಡುವೆ ಸಮನ್ವಯತೆ ಇರಬೇಕು. ಕಾಮಗಾರಿ ಆಯ್ಕೆ ಮಾಡುವಾಗ ಪರಸ್ಪರ ಚರ್ಚೆ ಮೂಲಕ ನಿರ್ಧಾರ ಕೈಗೊಳ್ಳಬೇಕು. ಆಗ ಶಾಶತ್ವವಾದ ಯೋಜನೆಗಳಿಗೆ ಅಗತ್ಯವಿರುವ ಅನುದಾನ ಬಿಡುಗಡೆ ಮಾಡಿ ಗುಣಮಟ್ಟದ ಕೆಲಸಗಳು ಕಾರ್ಯರೂಪಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ರವೀಂದ್ರ ಮಾತನಾಡಿ, ಊರುಬಗೆ ಗ್ರಾಮ ಪಂಚಾಯಿತಿ ಅತಿವೃಷ್ಟಿ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಲ್ಲಿನ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು. ಆಶ್ರಯ ಮನೆಗಳಿಗೆ ಕಳೆದ ಐದಾರು ತಿಂಗಳಿಂದ ಹಣ ಬಿಡುಗಡೆಯಾಗುತ್ತಿಲ್ಲ. ಇದರಿಂದ ಫಲಾನುಭವಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಬಾಳೆಗದ್ದೆ ಗ್ರಾಮದಲ್ಲಿ ಸುಮಾರು 5 ಲಕ್ಷ ವೆಚ್ಚದಲ್ಲಿ ಜಿಪಂ ಅನುದಾನದಲ್ಲಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕ, ತಾಪಂ ಅನುದಾನದಲ್ಲಿ ದುರಸ್ತಿಗೊಂಡಿರುವ ಶಾಲಾ ಕಟ್ಟಡ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ಜಿಪಂ ಸದಸ್ಯರಾದ ವಿ.ಕೆ. ಶಿವೇಗೌಡ, ತಾಪಂ ಸದಸ್ಯರಾದ ನೇಪಾ ಆದಿತ್ಯ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎ. ವಿಜಯೇಂದ್ರ, ಶೋಭಾ, ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್‌ಕುಮಾರ್ ಇತರರು ಇದ್ದರು. ಸತೀಶ್ ಊರುಬಗೆ ನಿರೂಪಿಸಿ, ಎಸ್.ಎ. ವಾಸುದೇವ್ ವಂದಿಸಿದರು.