ಕೃಷಿಯಲ್ಲಿ ಮಹಿಳೆಯರ ಪಾತ್ರ ಮುಖ್ಯ: ಮೋಟಮ್ಮ
ತರೀಕೆರೆ: ಕೃಷಿಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ತಿಳಿಸಿದ್ದಾರೆ.
ಜಲಾನಯನ ಅಭಿವೃದ್ಧಿ ಇಲಾಖೆ ಹಾಗೂ ವಿವಿಧ ಇಲಾಖೆ ವತಿಯಿಂದ ಸಮಗ್ರ ಜಲಾನಯನ ನಿರ್ವಹಣಾ ಯೋಜನಾ ಹಂತ-2 ಕೃಷ್ಣಾಪುರ ಉಪ ಜಲಾನಯನ ವತಿಯಿಂದ ಸಮೀಪದ ಉಡೇವ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಜಲಾನಯನ ಮೇಳ-2014ರ ಮೇಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದರ್ಭ ಪ್ಯಾಕೇಜಿನಂತೆ, ರೈತರಿಗೆ ಆತ್ಮವಿಶ್ವಾಸ ತುಂಬಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹಿಳೆಯರು ಅರ್ಜಿ ಹಾಕಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕು, ರೈತ ಮಹಿಳೆಯರಲ್ಲಿ ವಿಶ್ವಾಸ ಬರಬೇಕು, ಬಡವರನ್ನು ಅರ್ಥ ಮಾಡಿಕೊಂಡು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ ಎಂದರು.
ಸಂಸದ ಕೆ. ಜಯಪ್ರಕಾಶ್ ಹೆಗಡೆ ಸ್ವಸಹಾಯ ಸಂಘಗಳಿಗೆ ಸುತ್ತು ನಿಧಿ ಚೆಕ್ ವಿತರಿಸಿ ಮತನಾಡಿ, 2002ರಿಂದ 2005ರ ವರೆಗೆ ಬಂದ ಬರಗಾಲ ಪರಿಹಾರವಾಗಿ ಸರ್ಕಾರ ವಿದರ್ಭ ಪ್ಯಾಕೇಜ್ ಯೋಜನೆ ಜಾರಿಗೊಳಿಸಿದೆ ಎಂದರು. ಶಾಸಕ ಜಿ.ಎಚ್. ಶ್ರೀನಿವಾಸ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲ್ಲತ್ತಿಗಿರಿ ರಸ್ತೆ ಇಳಿಜಾರಿನಿಂದಾಗಿ ಅಪಘಾತಗಳು ಹೆಚ್ಚಾಗುತ್ತಿದೆ. ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲಾಗುವುದು, ಕುಡಿಯುವ ನೀರು ಸರಬರಾಜಿಗಾಗಿ ಆಳವಾಗಿ ಕಾಲುವೆ ತೋಡಿ ಪೈಪ್ ಜೋಡಿಸಲಾಗುವುದು ಎಂದು ತಿಳಿಸಿದರು. ಜಿಪಂ ಅಧ್ಯಕ್ಷೆ ಟಿ.ಸಿ. ಪದ್ಮಚಂದ್ರಪ್ಪ, ಜಿಪಂ ಸದಸ್ಯೆ ಹೇಮಾವತಿ ಕೃಷ್ಣಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಭಾಗ್ಯ ಮಂಜಪ್ಪ, ಕಾಮನದುರ್ಗ ಗ್ರಾ.ಪಂ.ಅಧ್ಯಕ್ಷ ಸಿ. ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.