ಪ.ಜಾತಿಯವರು ಸ್ವಾವಲಂಬಿಗಳಾಗಿ
ಚಿಕ್ಕಮಗಳೂರು: ಪರಿಶಿಷ್ಟ ಜಾತಿಯವರು ಸ್ವಾಭಿಮಾನಿ, ಸ್ವಾವಲಂಬಿಗಳಾಗಬೇಕೆಂದು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಕರೆ ನೀಡಿದರು.
ಜಿಲ್ಲಾ ಕಾಂಗ್ರೆಸ್ನ ಪರಿಶಿಷ್ಟ ಜಾತಿ ಘಟಕದ ಆಶ್ರಯದಲ್ಲಿ ಹಿರೇಮಗಳೂರು ಸಮೀಪದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪರಿಶಿಷ್ಟ ಜಾತಿಯವರು ಶಿಕ್ಷಣವಂತರಾಗಿ, ಸ್ವಾಭಿಮಾನಿಯಾಗಿ, ಸ್ವಾವಲಂಬಿಯಾಗಿ ಬದುಕಬೇಕೆಂದು ಹೇಳಿದರು.
ಯಾವುದೇ ಕಾರ್ಯಕ್ರಮ ಮಾಡಿದರೂ ಅದು ಅಚ್ಚುಕಟ್ಟಾಗಿ ವ್ಯವಸ್ಥಿತಬದ್ಧವಾಗಿ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆ ಮಾಹಿತಿಯನ್ನು ಮನೆ- ಮನೆಗಳಿಗೆ ತೆರಳಿ ತಿಳಿಸುವ ಜತೆಗೆ ಮುಂದಿನ ದಿನಗಳ ಬಗ್ಗೆ ಚರ್ಚಿಸಿ ಸಲಹೆ ಪಡೆಯಬೇಕು. ಆಗ ಮಾತ್ರ ಒಂದು ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ. ಇದರಿಂದ ಒಗ್ಗಟ್ಟಿನ ಪ್ರದರ್ಶನದ ಜತೆಗೆ ಸ್ವಾವಲಂಬಿಯಾಗಿ ಬದುಕಬಹುದೆಂಬುದನ್ನು ತೋರಿಸಿಕೊಡಬೇಕು ಎಂದು ಹೇಳಿದರು.
ದಲಿತ ನಾಯಕರು, ಮುಖಂಡರು ಸಮಾಜದ ಪರವಾಗಿ ಎಷ್ಟೇ ಒಳ್ಳೆಯ ಕೆಲಸ ಮಾಡಲಿ, ಅವರ ಬಗ್ಗೆ ವಿನಾಕಾರಣ ನಮ್ಮವರೇ ಆರೋಪ, ಟೀಕೆ ಮಾಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಒಂದು ವರ್ಗಕ್ಕೆ ಸೀಮಿತವಲ್ಲ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿವೆ. ಇವುಗಳ ಮೂಲ ಉದ್ದೇಶ ಕೇವಲ ಒಂದು ಜಾತಿಗೆ ಅನುಕೂಲವಾಗಲು ಎಂದಲ್ಲ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದರು. ಇದರ ಪ್ರಯೋಜನ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬಡವರು ಮತ್ತು ಮಾನವ ಕುಲಕ್ಕಾಗಿ ದುಡಿದರು. ದಲಿತರು ತಮ್ಮ ಕಾಲಿನ ಮೇಲೆ ತಾವೇ ನಿಲ್ಲುವಂತಾಗಬೇಕೆಂದು ಆಪೇಕ್ಷೆ ಪಟ್ಟಿದ್ದರು. ಪರಿಶಿಷ್ಟ ಜಾತಿಯವರು ಶಿಕ್ಷಣವಂತರಾಗಬೇಕು. ಆರ್ಥಿಕವಾಗಿ ಮುಂದೆ ಬರಬೇಕು. ಸ್ವಾಭಿಯಾನಿಯಾಗಿ ಬದುಕುವ ಛಲ ಬರಬೇಕು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರು ಸುಮಾರು 15 ವಿವಿಧ ಭಾಗ್ಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಸಿದವರಿಗೆ ಮಾತ್ರ ಹಸಿವಿನ ಸಂಕಟ ಅರ್ಥವಾಗುತ್ತದೆ. ನೋಟಿಗಾಗಿ ವೋಟು ಎಂಬುದನ್ನು ಬಿಡಿ, ನಮ್ಮ ಋಣ ಕಾಂಗ್ರೆಸ್ಗೆ ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮೋಟಮ್ಮ ಅವರನ್ನು ಸನ್ಮಾನಿಸಲಾಯಿತು. ಪಕ್ಷದ ಕಾರ್ಯಕರ್ತರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ಜಿಲ್ಲಾ ಕಾಂಗ್ರೆಸ್ನ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. ಸಚಿವ ಕೆ. ಅಭಯಚಂದ್ರ ಜೈನ್, ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಶ್ರೀನಿವಾಸ್, ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ನ ಪರಿಶಿಷ್ಟ ಜಾತಿ ಘಟಕದ ರಾಜ್ಯಾಧ್ಯಕ್ಷ ಎನ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ಸಂದೀಪ್ ಉಪಸ್ಥಿತರಿದ್ದರು.
ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ
ಚಿಕ್ಕಮಗಳೂರು: ನಗರದ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದ ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಮಾರ್ಗದ ಕಾಮಗಾರಿಯ ಶಂಕುಸ್ಥಾಪನೆಯ ಸಮಾರಂಭದಲ್ಲಿ ಶಾಸಕ ಸಿ.ಟಿ. ರವಿ ಅವರು ಆಡಿದ ಮಾತಿಗೆ ಕೇಂದ್ರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ತಿರುಗೇಟು ನೀಡಿದರು.
ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಶಾಸಕ ಸಿ.ಟಿ. ರವಿ ಮಾತನಾಡಿ, ರೈಲ್ವೆ ಬಜೆಟ್ನಲ್ಲಿ ಈ ಕಾಮಗಾರಿಗೆ ಹಣ ಇಡದೇ ಕಲ್ಲು (ಶಂಕುಸ್ಥಾಪನೆ) ಹಾಕಿದರೆ ಸರಿ ಆಗಲಾರದು. ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಕಾಲದಲ್ಲಿ ಕಡೂರು- ಚಿಕ್ಕಮಗಳೂರು ರೈಲ್ವೆ ಯೋಜನೆ ಜಾರಿಗೆ ಬಂದಿತ್ತು. ಈ ಕಾಮಗಾರಿ ಹಲವು ವರ್ಷಗಳನ್ನು ತೆಗೆದುಕೊಂಡಿತ್ತು. ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಕಾಮಗಾರಿಗೆ ಹಣ ಬಿಡುಗಡೆಯಾಗಿಲ್ಲ, ಭೂ ಸ್ವಾಧೀನ ಪಡಿಸಿಕೊಂಡಿಲ್ಲ, ಆದರೂ ಈ ಕಾಮಗಾರಿಗೆ ತರಾತುರಿಯಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ. ಇದರ ಹಿನ್ನಲೆ ಏನೇ ಇರಲೀ ಇದನ್ನು ಸ್ವಾಗತಿಸುತ್ತೇನೆ ಎಂದು ಕೊಂಕು ನುಡಿಗಳನ್ನಾಡಿದರು.
ಕೇಂದ್ರದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಯಾರಿಗೂ ಖುಷಿ ಪಡಿಸಲು ಈ ಕೆಲಸ ಮಾಡುತ್ತಿಲ್ಲ. ಚುನಾವಣೆ ದೃಷ್ಟಿಯಿಂದಲೂ ಅಲ್ಲ. ಜನರಿಗೆ ಅನುಕೂಲವಾಗುವ ಶಾಶ್ವತ ಕೆಲಸಗಳನ್ನು ನಿಯತ್ತಿನಿಂದ ಮಾಡುತ್ತಿದ್ದೇವೆ. ಬಜೆಟ್ ನಲ್ಲಿ ಚಿಕ್ಕಮಗಳೂರು- ಸಕಲೇಶಪುರ ರೈಲ್ವೆ ಕಾಮಗಾರಿಗೆ ಎಷ್ಟು ಹಣ ಇಟ್ಟಿದ್ದೇವೆಂದು ಬಜೆಟ್ ಕಾಪಿ ತಂದು ಇಲ್ಲಿ ತೋರಿಸಲು ಆಗುವುದಿಲ್ಲ ಎಂದು ಕಿಡಿಕಾರಿದರು. ಈ ಕಾಮಗಾರಿಗೆ ರಾಜ್ಯ ಸರ್ಕಾರ ಈಗಾಗಲೇ 15 ಕೋಟಿ ಕೊಟ್ಟಿದೆ. ಜಿಲ್ಲಾಧಿಕಾರಿಗಳೇ ಅವರಿಗೆ (ಸಿ.ಟಿ. ರವಿ) ನೀವೇ ಹೇಳಿ. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು ಎಂದ ಖರ್ಗೆ ಅವರು, ರವಿ ಅವರು ವೇದಿಕೆಗೆ ಬರುವ ಮೊದಲು ಚೆನ್ನಾಗಿಯೇ ಇರುತ್ತಾರೆ. ವೇದಿಕೆಗೆ ಬಂದ ಮೇಲೆ ಸ್ಟ್ರಾಂಗ್ ಆಗ್ತಾರೆ, ಜೋಶ್ ಬರುತ್ತೆ ಎಂದು ವ್ಯಂಗ್ಯವಾಡಿದರು.