ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ರಾಜಿ ಸಂಧಾನದಿಂದ ವ್ಯಾಜ್ಯ ಇತ್ಯರ್ಥಕ್ಕೆ ಮುಂದಾಗಿ

Vishwanath S
Updated On : 24 Feb 2014, 11:33 am

ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಫೆ.23
ನ್ಯಾಯಾಲಯಗಳಲ್ಲಿ ಯಾವುದೇ ಹಂತದಲ್ಲಿರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಸಾರ್ವಜನಿಕರು ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎ.ಎನ್. ವೇಣುಗೋಪಾಲಗೌಡ ಕರೆ ನೀಡಿದ್ದಾರೆ.
ಜಿಲ್ಲಾ ನ್ಯಾಯಾಲಯದ ಪೂರಕ ಕಟ್ಟಡದ ಮೇಲ್ಭಾಗದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಕೀಲರ ಸಂಘ ಶನಿವಾರ ಏರ್ಪಡಿಸಿದ್ದ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮಯ ವ್ಯಯ ಆಗಲ್ಲ: ಲೋಕ ಅದಾಲತ್‌ಗಳಲ್ಲಿ ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ರಾಜಿ ಸಂಧಾನಗಳ ಮೂಲಕ ಇತ್ಯರ್ಥಪಡಿಸುವುದರಿಂದ ಇಬ್ಬರೂ ಕಕ್ಷಿದಾರರಿಗೆ ಯಾವುದೇ ರೀತಿಯ ವೈಮನಸ್ಸು ಬಾರದೇ ನ್ಯಾಯಯುತ ತೀರ್ಮಾನ ಸಿಕ್ಕಿದಂತಾಗುತ್ತದೆ ಎಂದ ಅವರು, ಈ ರೀತಿಯ ರಾಜಿ ಪ್ರಕರಣಗಳಿಂದ ನ್ಯಾಯಾಲಯದ ಸಮಯ ವ್ಯಯ ಆಗದೆ ಪ್ರಕರಣಗಳು ಇತ್ಯರ್ಥವಾಗಲು ಅನುಕೂಲವಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡು ರಾಜ್ಯದಲ್ಲಿಯೇ ಉತ್ತಮ ಸ್ಥಾನ ಹೊಂದಿದ್ದು, ಈ ಬಾರಿಯೂ ಕಳೆದ ಸಾಲಿಗಿಂತ ಹೆಚ್ಚಿನ ಪ್ರಕರಣಗಳು ಇತ್ಯರ್ಥಪಡಿಸಿ ಉತ್ತಮ ಸಾಧನೆ ಸಾಧಿಸುವುದರೊಂದಿಗೆ ಪ್ರಕರಣಗಳು ಶೀಘ್ರ ವಿಲೇವಾರಿಯಾಗಿ ಕಕ್ಷಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಭೂಸ್ವಾಧೀನ ದಾವೆಗಳ ಮೇಲಿನ ಅಮಲ್ದಾರಿ ಕೇಸುಗಳಲ್ಲಿ ಪರಿಹಾರ ಮೊತ್ತವನ್ನು ಜಿಲ್ಲಾಧಿಕಾರಿಗಳು ಶೀಘ್ರದಲ್ಲಿ ಭರಿಸಿದಲ್ಲಿ ಸಾರ್ವಜನಿಕರು ತಾವು ಕಳೆದುಕೊಂಡ ಜಮೀನಿನ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದರು.
ಸಹಕಾರ ಅಗತ್ಯ: ಹೆಚ್ಚಿನ ಮೋಟಾರ್ ವಾಹನ ನಷ್ಟ ಪರಿಹಾರ ಪ್ರಕರಣಗಳಲ್ಲಿ ಅಪಘಾತದಿಂದ ಆದ ನಷ್ಟ ಪರಿಹಾರವನ್ನು ಮಾತ್ರ ನಿಗದಿಪಡಿಸಬೇಕಾಗಿದ್ದು, ಇವುಗಳ ವಿಚಾರಣೆ ಅವಶ್ಯಕತೆ ಕಡಿಮೆ ಇರುತ್ತದೆ. ಇವುಗಳ ಶೀಘ್ರ ಇತ್ಯರ್ಥಕ್ಕೆ ವಿಮಾ ಕಂಪನಿಯ ಅಧಿಕಾರಿಗಳು ಸಹಕರಿಸಬೇಕೆಂದು ತಿಳಿಸಿದರು.
ವಕೀಲರ ಸಹಕಾರದಿಂದ ಯಾವುದೇ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಬಹುದು. ಕ್ಲಿಷ್ಟಕರವಾದ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ನಡೆಸುವುದು ಸೂಕ್ತ. ಆದರೆ, ಕುಟುಂಬದ ಸದಸ್ಯರ ಆಸ್ತಿ ವಿವಾದದಂತಹ ಪ್ರಕರಣಗಳನ್ನು ರಾಜಿ ಮಾಡುವುದರಿಂದ ಅಣ್ಣ- ತಮ್ಮಂದಿರ ಸಂಬಂಧ ಉಳಿಯುತ್ತದೆ ಎಂದರು.
ಬ್ಯಾಂಕ್ ಅಧಿಕಾರಿಗಳು ತಮ್ಮ ಗ್ರಾಹಕರು ಪಡೆದಂತಹ ಸಾಲದ ಪ್ರಕರಣಗಳಲಿ ಬಡ್ಡಿ ಸೇರಿದಂತೆ ಮತ್ತಿತರೆ ಖರ್ಚುಗಳಿಗೆ ರಿಯಾಯಿತಿ ನೀಡುವುದರಿಂದ ಬ್ಯಾಂಕ್‌ನ ಮೊಕದ್ದಮೆಗಳು ಸಮಾಪ್ತಿ ಮಾಡಬಹುದಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದವರು ಸಾರ್ವಜನಿಕರಿಗೆ ದಾವೆ ಹಾಗೂ ಮತ್ತಿತರ ಪ್ರಕರಣಗಳ ಸಾಧಕ ಬಾಧಕಗಳನ್ನು ಎರಡು ಮೂರು ಬಾರಿ ತಿಳಿ ಹೇಳುವುದರಿಂದ ಅನ್ಯಾಯವಾಗದೇ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಾಧ್ಯ ಎಂದರು.
ಹಗೆತನ ದೂರ: ರಾಜಿ ಸಾಧ್ಯವಾಗುವಂತಹ ಕ್ರಿಮಿನಲ್ ಪ್ರಕರಣಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸರ್ಕಾರಿ ಅಭಿಯೋಜಕರು ಸಮನ್ವಯದೊಂದಿಗೆ ಚರ್ಚಿಸಿ ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಮಾಡಿಸುವುದರಿಂದ ಸಮಾಜದಲ್ಲಿನ ದ್ವೇಷ ಹಾಗೂ ಹಗೆತನ ದೂರವಾಗಲು ಸಾಧ್ಯ ಎಂದು ಹೇಳಿದರು.
ಒಗ್ಗಟ್ಟು ಬೇಕು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಎಚ್.ಎಸ್. ಕಮಲ ಮಾತನಾಡಿ, ಅಧಿಕಾರಿಗಳು ಒಳಗೊಂಡಂತೆ ಕಕ್ಷಿದಾರರು, ವಕೀಲರು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಹೆಚ್ಚಿನ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಇತ್ಯರ್ಥಪಡಿಸಬಹುದಾಗಿದೆ ಎಂದರು.
ಡಿಸಿ ಶೇಖರಪ್ಪ, ಎಸ್ಪಿ ಆರ್. ಚೇತನ್, ಜಿಪಂ ಸಿಇಒ ಕರುಣಾಕರ್, ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮ್ಮದ್, ರಾಷ್ಟ್ರೀಯ ವಕೀಲರ ಪರಿಷತ್ ಸದಸ್ಯ ಭೋಜೇಗೌಡ ಇದ್ದರು. ಪ್ರಧಾನ ಹಿರಿಯ ಸಿವಿಲ್ ನ್ಯಾ. ಮಂಜುನಾಥ್ ನಾಯಕ್ ಸ್ವಾಗತಿಸಿದರು. ವಕೀಲ ಬಿ. ಸುಜೇಂದ್ರ ನಿರೂಪಿಸಿದರು. ವಕೀಲ ಸಂಘದ ಉಪಾಧ್ಯಕ್ಷ ರಘುನಾಥ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement