ಲಾರಿಗಳ ಡಿಕ್ಕಿ: ಇಬ್ಬರು ಚಾಲಕರು ಸಜೀವ ದಹನ
ಚಳ್ಳಕೆರೆ: ತಾಲೂಕಿನ ದೊಡ್ಡೇರಿ ಮೀರಸಭಿಹಳ್ಳಿ ಕೈಮರ ರಸ್ತೆಯ ಕಸ್ತೂರಿ ತಿಮ್ಮನಹಳ್ಳಿ ಗೇಟ್ ಬಳಿ ಭಾನುವಾರ ಬೆಳಗಿನ ಜಾವ 6.30ರ ಸುಮಾರಿಗೆ ಎರಡು ಲಾರಿಗಳ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ಎರಡೂ ಲಾರಿಗಳ ಚಾಲಕರು ಮೃತಪಟ್ಟಿದ್ದು, 4225 ಕೋಳಿಗಳು ಸಾವಿಗೀಡಾಗಿವೆ. ಮೃತಪಟ್ಟ ಚಾಲಕರನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ತಾಪಡತ್ರಿಯ ರಾಮು(32) ಮತ್ತು ಪಾವಗಡ ತಾಲೂಕಿನ ಅರಸೀಕೆರೆ ಗ್ರಾಮದ ಶ್ರೀನಿವಾಸ್(28) ಎಂದು ಗುರುತಿಸಲಾಗಿದೆ. ಆಂಧ್ರದ ಕಡಪದಿಂದ ಮಂಗಳೂರಿಗೆ ಕಡಪ ಕಲ್ಲುಗಳನ್ನು ಸಾಗಿರುತ್ತಿದ್ದ ಲಾರಿಯು ಕಸ್ತೂರಿ ತಿಮ್ಮನಹಳ್ಳಿ ಗೇಟ್ ಬಳಿ ಎದುರುಗಡೆ ಹೊಸಪೇಟೆಯಿಂದ ಕೋಳಿಗಳನ್ನು ಸಾಗಿಸುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು ಎರಡೂ ಲಾರಿಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಆಗ ಚಾಲಕರಿಬ್ಬರು ಮತ್ತು ಸಾವಿರಾರು ಕೋಳಿಗಳು ಸಾವಿಗೀಡಾಗಿವೆ. ಕೋಳಿ ತುಂಬಿದ ಲಾರಿಯಲ್ಲಿದ್ದ ಇಬ್ಬರು ಹಮಾಲರನ್ನು ರಕ್ಷಿಸಲಾಗಿದ್ದು, ಕ್ಲೀನರ್ ಲಾರಿಯಿಂದ ಹೊರಗೆ ಜಿಗಿದು ಪಾರಾಗಿದ್ದಾನೆ.