ನಮೋ ಟೀ ಸ್ಟಾಲ್ ಉದ್ಘಾಟನೆ
ಕ.ಪ್ರ.ವಾರ್ತೆ , ಬಾಳೆಹೊನ್ನೂರು , ಫೆ. 24
ನರಸಿಂಹರಾಜಪುರ ತಾಲೂಕು ಬಿಜೆಪಿ ಘಟಕ ಹಾಗೂ ನಮೋ ಬ್ರಿಗೇಡ್ ಬಾಳೆಹೊನ್ನೂರು ಘಟಕದ ವತಿಯಿಂದ ಪಟ್ಟಣದ ಜೇಸಿ ವೃತ್ತದಲ್ಲಿ ಭಾನುವಾರ ನಮೋ ಟೀ ಸ್ಟಾಲ್ ಉದ್ಘಾಟಿಸಲಾಯಿತು.
ಶೃಂಗೇರಿ ಶಾಸಕ ಡಿ.ಎನ್. ಜೀವರಾಜ್ ಟೀ ಸ್ಟಾಲ್ಗೆ ಭೇಟಿ ನೀಡಿ ಮಾತನಾಡಿ, ಇಡೀ ದೇಶದಲ್ಲಿ ಮೋದಿ ಹವಾ ಕಾಣುತ್ತಿದ್ದು, ಇದು ಚುನಾವಣೆ ಸಮಯಕ್ಕೆ ಬಿರುಗಾಳಿಯಾಗಿ ಬೀಸಿ ಕಾಂಗ್ರೆಸ್ ಪಕ್ಷವು ಧೂಳೀಪಟವಾಗಲಿದೆ. ಚಹಾ ಹಾಕುವ ಕಸದ ತೊಟ್ಟಿಗೆ ಮೋದಿಯನ್ನು ಟೀಕಿಸಿದ್ದ ಮಣಿಶಂಕರ್ ಅಯ್ಯರ್ ಹೆಸರನ್ನು ಇಟ್ಟಿರುವುದು ಸಮರ್ಪಕವಾಗಿದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿಯಾಗಬೇಕೆನ್ನುವುದು ದೇಶದ ಬಹುಸಂಖ್ಯಾತರ ಅಭಿಲಾಷೆಯಾಗಿದೆ. ಈ ಹಿನ್ನೆಲೆಯಲ್ಲಿ ದೇಶವ್ಯಾಪಿ ನಡೆಯುತ್ತಿರುವ ಚಾಯ್ ಪೇ ಚರ್ಚಾ, ನಮೋ ಟೀ ಸ್ಟಾಲ್ ಬಹು ಜನಪ್ರಿಯವಾಗಿದ್ದು, ಈ ಅಭಿಯಾನ ಯಶಸ್ವಿಗೊಳಿಸಿ ಚಹಾ ಮಾರುವವನೂ ದೇಶದ ಪ್ರಧಾನಿಯಾಗಬಹುದು ಎಂಬುದನ್ನು ರೂಪಿಸಬೇಕೆಂದರು.
ಬಿಜೆಪಿ ಹೋಬಳಿ ಕಾರ್ಯದರ್ಶಿ ಪ್ರಭಾಕರ್, ತಾಲೂಕು ವಕ್ತಾರ ಬಿ. ಜಗದೀಶ್ಚಂದ್ರ, ನಮೋ ಬ್ರಿಗೇಡ್ ಅಧ್ಯಕ್ಷ ಬಿ.ವಿ. ದೀಪಕ್ ಭಟ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾಂತ ಮೋರ್ಚಾ ಅಧ್ಯಕ್ಷ ಅಶ್ರಫ್, ತಾಲೂಕು ಹಿಂದುಳಿದ ವರ್ಗದ ಕಾರ್ಯದರ್ಶಿ ರವೀಂದ್ರಾಚಾರ್, ಬಿ. ಕಣಬೂರು ಗ್ರಾಮ ಪಂಚಾಯಿತಿ ಸದಸ್ಯರಾದ ಇಬ್ರಾಹಿಂ ಶಪಿ, ಆರ್.ಡಿ. ಮಹೇಂದ್ರ, ನಮೋ ಬ್ರಿಗೇಡ್ನ ದಯಾಕರ್ ಸುವರ್ಣ, ಎಂ.ಡಿ. ಪ್ರಕಾಶ್, ನಿತ್ಯಾನಂದ ನೇಮನನಳ್ಳಿ, ಹಲಸೂರು ಮಂಜು, ಕುಮಾರ್, ವಿಜಯ ಉಪಸ್ಥಿತರಿದ್ದರು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಟೀ ಮಾರುವ ಕಾರ್ಯಕ್ರಮದಲ್ಲಿ 4500 ಚಹಾ ವಿತರಿಸಲಾಯಿತು ಎಂದು ಸಂಘಟಕರು ಹೇಳಿದ್ದಾರೆ.