ಭಾಷೆಗಾಗಿ ಉಗ್ರ ಅಭಿಮಾನ ಸಲ್ಲ
ಕ.ಪ್ರ.ವಾರ್ತೆ , ಕೊಪ್ಪ , ಫೆ. 24
ಕನ್ನಡ ಪ್ರೀತಿಸಿ ಬೆಳೆಸಿ, ಇತರೆ ಭಾಷೆಗಳನ್ನು ದುಡಿಮೆಗಾಗಿ ಕಲಿಯಿರಿ ಎಂದು ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೆ.ಜಿ. ನರಸಿಂಹ ಶಾಸ್ತ್ರೀ ಕರೆ ನೀಡಿದ್ದಾರೆ.
ತಾಲೂಕಿನ ಬಸರೀಕಟ್ಟೆಯ ಸದ್ಗುರು ಪ್ರೌಢಶಾಲಾ ಆವರಣದಲ್ಲಿ ಸೋಮವಾರ ನಡೆದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.
ರಾಜ್ಯದ 1.40 ಕೋಟಿ ವಿದ್ಯಾರ್ಥಿಗಳಲ್ಲಿ 60 ಲಕ್ಷ ಆಂಗ್ಲ ಮಾಧ್ಯಮ, 80 ಲಕ್ಷ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ಅಂಕಿ ಅಂಶ ಕೆಲವೇ ವರ್ಷಗಳಲ್ಲಿ ಅದಲು ಬದಲಾಗುವ ಸಾಧ್ಯತೆ ಇದೆ ಎಂದ ಅವರು, ತಮಗೆ ಇಷ್ಟವಾದ ಭಾಷೆ ಕಲಿಯಲು ಯಾವುದೇ ಅಡ್ಡಿ ಇಲ್ಲ. ರಾಜ್ಯದಲ್ಲಿ ಕೇಂದ್ರೀಯ ಶಿಕ್ಷಣ ಪಠ್ಯಕ್ರಮ ಅಳವಡಿಸಿಕೊಂಡು, ಕನ್ನಡ, ಆಂಗ್ಲ, ಹಿಂದಿ, ಪ್ರಾಂತೀಯ, ಸೋದರ ಭಾಷೆ ಕಲಿಸುವುದರ ಜತೆಗೆ ಸಮಾಜ ವಿಜ್ಞಾನವನ್ನು ಕನ್ನಡ, ಹಿಂದಿಯಲ್ಲಿ, ಗಣಿತ, ವಿಜ್ಞಾನವನ್ನು ಆಂಗ್ಲ ಮಾಧ್ಯಮದಲ್ಲಿ ಹಾಗೂ ಎಲ್ಲ ಹಂತದಲ್ಲಿ ನೀತಿ ಶಿಕ್ಷಣ ಪ್ರಾಂತೀಯ ಭಾಷೆ ಕಲಿಕೆ ಕಡ್ಡಾಯಗೊಳಿಸಬೇಕೆಂಬ ಆಶಯ ವ್ಯಕ್ತಪಡಿಸಿದರು.
ಹೃದಯದ ಭಾಷೆ: ಕನ್ನಡ ಭಾಷೆಯಲ್ಲಿರುವ ಪ್ರೀತಿ, ಮನುಷ್ಯ ಸಂಬಂಧಗಳು ಆಂಗ್ಲ ಭಾಷೆಯಲ್ಲಿ ದೊರೆಯುವುದಿಲ್ಲ. ಕನ್ನಡ ಹೃದಯ ಭಾಷೆ, ಭಾಷೆಯ ಬೆಳವಣಿಗೆಗೆ ಉಗ್ರ ಅಭಿಮಾನ ಸಹಕಾರಿಯಲ್ಲ. ಭಾಷೆಯ ಬಳಕೆ ಅದರ ಚಿರಂತನ ಸ್ಥಾಯಿಯಾಗಿಸುತ್ತದೆ ಎಂದರು.
ಸಾಹಿತ್ಯ ಲೋಕದಲ್ಲಿಂದು ಅಸಂಖ್ಯ ಇಸಂಗಳು ತಾಕಲಾಡುತ್ತಿವೆ. ಬಡತನ, ಬಂಡವಾಳಶಾಹಿ, ಸಮಾಜವಾದ, ಪ್ರಕೃತಿವಾದ, ಸ್ತ್ರೀವಾದ, ಪಾಶ್ಟಿಮಾತ್ಯ ವಾದ, ವಸಾಹತುಶಾಹಿವಾದ, ಆದರ್ಶವಾದ, ರಚನಾವಾದ, ಪುನರ್ರಚನಾವಾದ ಅಸ್ತಿತ್ವವಾದ... ಹೀಗೆ ವಾದಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಭಾಷಾ ಮತ್ತು ಸಾಹಿತ್ಯ ಬೋಧಕರಿಗೆ ವಿಶೇಷವಾದ ಜವಾಬ್ದಾರಿ ಇರುತ್ತದೆ. ಹೃದಯ ಬೆಸೆಯುವ ಕೆಲಸ ಪ್ರಾಥಮಿಕ ಶಿಕ್ಷಕರಿಂದ ವಿಶ್ವವಿದ್ಯಾನಿಲಯದ ಹಂತದವರೆಗೆ ಬೋಧಿಸುವ ಉಪಾಧ್ಯಾಯರಿಂದ ಆಗಬೇಕಾಗಿದೆ ಎಂದು ಹೇಳಿದರು.
ಭಾಷಾಭಿಮಾನಕ್ಕೆ ಸಾಕ್ಷಿ: ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹೊರನಾಡಿನ ಧರ್ಮಕರ್ತ ಭೀಮೇಶ್ವರ ಜೋಷಿ, ಪುಟ್ಟ ಗ್ರಾಮದಲ್ಲಿ ತಾಲೂಕು ಸಮ್ಮೇಳನ ವೈಭವಯುತವಾಗಿ ನಡೆಯುವಂತಾಗಿರುವುದು ಕನ್ನಡಿಗರ ಭಾಷಾಭಿಮಾನಕ್ಕೆ ಸಾಕ್ಷಿ. ಅಲ್ಲದೆ, ಶತಮಾನೋತ್ಸವ ವರ್ಷಾಚರಣೆ ಸಮೀಪಿಸುತ್ತಿರುವ ಪರಿಷತ್ತು ದತ್ತಿನಿಧಿ ಸಂಗ್ರಹ ಮೂಲಕ ಪ್ರತಿ ಗ್ರಾಮಗಳಲ್ಲಿ ಪ್ರತಿ ತಿಂಗಳು ಕನ್ನಡ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡಿಗರನ್ನು ಜಾಗೃತಗೊಳಿಸಬೇಕೆಂದರು.
ಬಸರೀಕಟ್ಟೆ ಜನಾರ್ದನ ಸ್ವಾಮಿ ದೇವಾಲಯದಿಂದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನದ ಅಧ್ಯಕ್ಷರನ್ನು ತೆರೆದ ವಾಹನ, ಜಾನಪದ ವಾದ್ಯ, ಸ್ತಬ್ಧ ಚಿತ್ರಗಳ ಆಕರ್ಷಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಸಮ್ಮೇಳನದ ಅಂಗವಾಗಿ ರಾಷ್ಟ್ರಧ್ವಜವನ್ನು ಶಾಸಕ ಡಿ.ಎನ್. ಜೀವರಾಜ್, ನಾಡ ಧ್ವಜವನ್ನು ಕಸಾಪ ತಾಲೂಕು ಅಧ್ಯಕ್ಷ ಗುಡ್ಡೆತೋಟ ನಟರಾಜ್ ನೆರವೇರಿಸಿದರು.
ಬಸರೀಕಟ್ಟೆ ಸದ್ಗುರು ಪ್ರೌಢಶಾಲೆ ಸಕ್ರೇಡ್ ಹಾರ್ಟ್ ಶಾಲೆ, ಆಶ್ರಮ ಶಾಲೆ ವಿದ್ಯಾರ್ಥಿಗಳು ಆಕರ್ಷಕ ಸ್ತಬ್ಧ ಚಿತ್ರಗಳು ಸಾಹಿತ್ಯಭಿಮಾನಿಗಳನ್ನು ಆಕರ್ಷಿಸಿದವು.
ಕಸಾಪ ಜಿಲ್ಲಾಧ್ಯಕ್ಷ ನಾ.ಸು. ಶಿವಸ್ವಾಮಿ ಆಶಯ ನುಡಿನ್ನಾಡಿದರು. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಸ್.ಎನ್. ರಾಮಸ್ವಾಮಿ, ಸದ್ಗುರು ಶಿಕ್ಷಣ ಸಂಸ್ಥೆ ಅಧ್ಯಕ್ಷ ತಲವಾನೆ ಪ್ರಕಾಶ್, ಜಿಪಂ ಸದಸ್ಯ ಕುಕ್ಕಡಿಗೆ ರವೀಂದ್ರ, ಅನ್ನಪೂರ್ಣ ಚನ್ನಕೇಶವ, ತಾಪಂ ಅಧ್ಯಕ್ಷೆ ಪದ್ಮಾವತಿ ರಮೇಶ್, ಉಪಾಧ್ಯಕ್ಷ ಪೂರ್ಣಚಂದ್ರ, ರಾಮಕೃಷ್ಣ ಹೆಬ್ಬಾರ್, ಬಿ.ಎನ್. ಭಾಸ್ಕರ್, ಕೆ.ಕೆ. ಸಾಯಿನಾಥ್ ಉಪಸ್ಥಿತರಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ಜಿ.ಎಸ್. ಮಹಾಬಲ ಸ್ವಾಗತಿಸಿದರು.