'ಮೋದಿ ಪ್ರಧಾನಿಯಾಗೋದು ಖಚಿತ'
ಕ.ಪ್ರ.ವಾರ್ತೆ , ಕಡೂರು , ಫೆ. 24
ದೇಶದ ಜನ ಸಾಮಾನ್ಯರ ಅಭಿವೃದ್ದಿಯ ಚಿಂತನೆ ಹೊಂದಿರುವ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಬೇಕು ಎಂದು ಜನರು ಒಲವು ತೋರುತ್ತಿದ್ದು, ಅವರ ಚಿಂತನೆಗಳನ್ನು ಟೀ ಸ್ಟಾಲ್ ಆರಂಭಿಸುವ ಮೂಲಕ ಜನರಿಗೆ ತಿಳಿಸಿ, ಜನ ಬೆಂಬಲ ಕೋರಲಾಗುತ್ತಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಹೇಳಿದರು.
ಪಟ್ಟಣದ ಚೆಕ್ ಪೋಸ್ಟ್‌ನ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಯುವ ಮೋರ್ಚಾ ಘಟಕದಿಂದ ಆರಂಭಿಸಲಾದ ಟೀ ಸ್ಟಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿಯ ಚಿಂತನೆ: ಮಾರುವವರು ದೇಶದ ಪ್ರಧಾನಿಯಾಗಬಾರದು ಎಂದು ಯಾರೂ ಹೇಳಿಲ್ಲ. ಟೀ ಮಾರುವವರಲ್ಲೂ ದೇಶದ ಅಭಿವೃದ್ಧಿಯ ಚಿಂತನೆಗಳಿರುತ್ತದೆ. ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರು ದೇಶದ ಪ್ರಧಾನಿಯಾಗಬೇಕು ಎಂದು ದೇಶದ ಜನ ಸಾಮಾನ್ಯರ ಆಸೆಯಾಗಿದೆ ಎಂದರು.
ಟೀ ಸ್ಟಾಲ್ ಉಧ್ಘಾಟಿಸಿದ ಮಾಜಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಮಾತನಾಡಿ, ದೇಶ ರಕ್ಷಿಸುವ ಏಕೈಕ ಆಶಾಕಿರಣವಾಗಿರುವ ನರೇಂದ್ರ ಮೋದಿ ದೇಶದ ಜನತೆಯ ಮನ ಗೆದ್ದಿದ್ದಾರೆ. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಮೋದಿ ಪ್ರಧಾನಿಯಾಗುವುದು ಖಚಿತ ಎಂದು ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಎಚ್. ಶಂಕರ್, ಜಿಲ್ಲಾ ಮುಖಂಡ ಅರೇಕಲ್ ಪ್ರಕಾಶ್, ಕಾಮನಕೆರೆ ಶಶಿಧರ್, ಎಸ್.ವಿ. ಉಮಾಪತಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಎ.ಮಣಿ, ಪುರಸಭಾ ಸದಸ್ಯ ರಾಜೇಶ್, ಎಚ್.ವಿ. ಗಿರೀಶ್, ಶಿವಶಂಕರ್, ಬಿ.ಎಲ್. ಶ್ರೀನಿವಾಸ್, ಎಪಿಎಂಸಿ ಪ್ರಭಾರಿ ಅಧ್ಯಕ್ಷ ಕೃಷ್ಣಮೂರ್ತಿ ಇತರರು ಇದ್ದರು.