'ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ'
ಶೃಂಗೇರಿ: ಪ್ರತಿಯೊಬ್ಬ ವಿದ್ಯಾರ್ಥಿಯು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಆಳವಾದ ಅಧ್ಯಯನ ನಡೆಸಿ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ನಿವೃತ್ತ ಶಿಕ್ಷಕಿ ವಿಜಯಲಕ್ಷ್ಮಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪಟ್ಟಣದ ಅಭಿನವ ವಿದ್ಯಾತೀರ್ಥ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ, ವಿಜ್ಞಾನ ಸಂಘ ಹಾಗೂ ಜೆಸಿಬಿಎಂ ಕಾಲೇಜನ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ, ಪಶ್ಚಿಮ ಘಟ್ಟ ಜೀವ ವೈವಿಧ್ಯತೆಗಳ ಕುರಿತ ವಿಶೇಷ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನದ ಅನಿವಾರ್ಯತೆಯಿದೆ. ನಿತ್ಯದ ಜೀವನದಲ್ಲಿಯೂ ನಮಗೆ ವಿಜ್ಞಾನ ಬೇಕು. ವಿದ್ಯಾರ್ಥಿಗಳು ತಮ್ಮ ಸಾಧನೆಗಳ ಮೂಲಕ ವಿಜ್ಞಾನದ ಉಪಯೋಗ ಜನಸಾಮಾನ್ಯರಿಗೆ ತಲುಪಿಸುವಂತಾಗಬೇಕು ಎಂದರು. ಡಾ. ಕುಮಾರಸ್ವಾಮಿ ಉಡುಪ ಮಾತನಾಡಿ, ಜಗತ್ತಿನ ಅಪರೂಪದ ಸಸ್ಯ ಸಂಪತ್ತು, ಜೀವಪ್ರಭೇದಗಳು ಪಶ್ಚಿಮ ಘಟ್ಟದಲ್ಲಿವೆ. ಮಳೆಯ ಕಾಡುಗಳು ಇಲ್ಲಿವೆ. ಇವುಗಳು ವಿನಾಶದ ಅಂಚಿನಲ್ಲಿದೆ. ಅದನ್ನು ಉಳಿಸಲು ವಿದ್ಯಾರ್ಥಿಗಳು ಪಣತೊಡಬೇಕು ಎಂದರು. ಮುಖ್ಯ ಶಿಕ್ಷಕ ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಪ್ರಸ್ತಾವಿಕವಾಗಿ ಮಾತನಾಡಿದರು, ರಾಘವೇಂದ್ರ, ಅಭಿಜಿತ್ ಸ್ವಾಗತಿಸಿ, ಜ್ಯೋತಿ ನಿರೂಪಿಸಿ, ವಿಶ್ವನಾಥ್ ವಂದಿಸಿದರು. ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.