ಸಹಕಾರ ಸಂಘ ಚುನಾವಣೆ ಲೂವೀಸ್ ತಂಡಕ್ಕೆ ಜಯ
ಚಿಕ್ಕಮಗಳೂರು: ಕ್ರಿಶ್ಚಿಯನ್ ವಿವಿದೋದ್ದೇಶ ಸಹಕಾರ ಸಂಘದ ಕಾರ್ಯಕಾರಿ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಮಾಜಿ ಅಧ್ಯಕ್ಷ ಎಸ್.ಎಫ್. ಲೂವೀಸ್ ತಂಡಕ್ಕೆ ಜಯ ದೊರೆತಿದೆ.
2 ಮಹಿಳಾ ಮೀಸಲು ಮತ್ತು 9 ಸಾಮಾನ್ಯ ಕ್ಷೇತ್ರ ಸೇರಿದಂತೆ ಒಟ್ಟು 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 16 ಮಂದಿ ಸ್ಪರ್ಧಿಸಿದ್ದರು, ಎಸ್.ಎಫ್. ಲೂವೀಸ್, ಜಾನ್ ಕಣ್ಣನ್, ರೂಬಿನ್ ಮೊಸೆಸ್, ಸಿಲ್ವಾಸ್ಟರ್ ಮಸ್ಕರೇನಾಸ್, ಜೇಮ್ಸ್ ಡಿಸೋಜ, ವಿ.ಟಿ. ಥಾಮಸ್, ಫೆಲಿಕ್ಸ್ ಸಿಕ್ವೇರಾ, ಪಿ.ಜೆ. ಫ್ರಾನ್ಸಿಸ್, ವಿಕ್ಟರ್ ಜಾರ್ಜ್, ಮರಿಯಾ ಪ್ರಮೀಳಾ ಡಿಸೋಜಾ, ಸುರೇಖಾ ಸಂಪತ್ರಾಜ್ ಸೇರಿದಂತೆ 11 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ನೂತನವಾಗಿ ಆಯ್ಕೆಯಾದ ತಂಡಕ್ಕೆ ಐ.ಜಿ. ರಸ್ತೆಯ ಮಥಾಯಿಸ್ ಟವರ್ನಲ್ಲಿರುವ ಸಂಘದ ಕಚೇರಿಯಲ್ಲಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಜಿ ಅಧ್ಯಕ್ಷ ಎಸ್.ಎಫ್. ಲೂವೀಸ್, ಕಳೆದ 5 ವರ್ಷದ ಹಿಂದೆ ಆರಂಭವಾದ ಸಹಕಾರ ಸಂಘದಲ್ಲಿ 436 ಜನ ಸದಸ್ಯರನ್ನು ಹೊಂದಿದ್ದು, ಜಿಲ್ಲೆಯಲ್ಲಿ ಅನೇಕ ಮಂದಿ ಕ್ರೈಸ್ತರಿದ್ದು, ಅವರ ಆರ್ಥಿಕ ಅಭಿವೃದ್ಧಿಗಾಗಿ ಈ ಸಂಘ ಸ್ಥಾಪಿಸಲಾಗಿದೆ. ವಾಹನ ಸಾಲ, ಗೃಹಸಾಲ, ವೈಯುಕ್ತಿಕ ಸಾಲ, ವ್ಯಾಪಾರೋದ್ಯಮ ಸಾಲ ಸೇರಿದಂತೆ 1.5 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಸಾಲ ಪಡೆದವರು ಪ್ರಾಮಾಣಿಕವಾಗಿ ಹಿಂದಿರುಗಿಸುತ್ತಿರುವುದರಿಂದ ಶೇ. 90 ರಷ್ಟು ಸಾಲ ವಸೂಲಾತಿಯಾಗಿ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಚುನಾವಣಾಧಿಕಾರಿ ವಿಶ್ವನಾಥ್, ಸಿ.ಎಂ. ನಾರಾಯಣಸ್ವಾಮಿ, ಗುರುಮೂರ್ತಿ, ಕಾರ್ಯದರ್ಶಿ ಶಶಿರೇಖಾ, ಪ್ರತಿಮಾ ಹಾಜರಿದ್ದರು.