ಗಾಂಧೀ ಪ್ರೇರಿತ ಅರ್ಥವ್ಯವಸ್ಥೆ ಅಗತ್ಯ
ಚಿಕ್ಕಮಗಳೂರು: ಎಫ್.ಡಿ.ಐ. ಜಾರಿಗೆ ಬಂದರೆ ಲಕ್ಷಾಂತರ ಜನರ ಬದುಕು ಕಸಿದುಕೊಂಡಂತಾಗುತ್ತದೆ ಎಂದು ಶಾಸಕ ಸಿ.ಟಿ. ರವಿಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ವರ್ತರಕ ಸಂಘದ 30ನೇ ವಾರ್ಷಿಕೋತ್ಸವದ ಪ್ರಯುಕ್ತ ಇತ್ತೀಚೆಗೆ ಏರ್ಪಡಿಸಿದ್ದ ಚಿಕ್ಕಮಗಳೂರು ವಾಣಿಜ್ಯೋತ್ಸವ- 2014 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಗಾಂಧಿಪ್ರೇರಿತ ಅರ್ಥವ್ಯವಸ್ಥೆ: ಗಾಂಧಿಪ್ರೇರಿತ ಅರ್ಥವ್ಯವಸ್ಥೆ ನಮ್ಮ ದೇಶಕ್ಕೆ ಈಗ ಅಗತ್ಯವಿದೆಯೇ ಹೊರತು, ಎಫ್.ಡಿ.ಐ. ನಮ್ಮ ದೇಶಕ್ಕೆ ಅಲ್ಲ. ಇದು ದಾಸ್ಯದ ಪ್ರವೃತ್ತಿಯನ್ನು ವೃದ್ಧಿಸುತ್ತದೆ. ಈ ನಿಟ್ಟಿನಲ್ಲಿ ಗಾಂಧಿ ಪರಿಣಿತಿಯ ಅರ್ಥವ್ಯವಸ್ಥೆ ದೇಶದಲ್ಲಿ ಬರಬೇಕು ಎಂದರು.
ಆದರೆ, ಗಾಂಧಿಯವರ ಆರ್ಥಿಕ ವಿಚಾರಧಾರೆ ಯಾರೂ ಜಾರಿಗೆ ತರಲು ಪ್ರಯತ್ನಿಸುತ್ತಿಲ್ಲ. ಗಾಂಧಿ ಎಂಬ ಸಂತರ ಹೆಸರು ಕೆಲವರಿಗೆ ಬೇಕು. ಅವರ ಸರಳತೆಯನ್ನು ಸರಕಾಗಿಸುತ್ತಾರೆ. ಆದರೆ, ಅವರ ವಿಚಾರಧಾರೆ ಹಾಗೂ ಆರ್ಥಿಕ ನೀತಿಯನ್ನು ಜಾರಿಗೆ ತರುವಲ್ಲಿ ಆಸಕ್ತಿ ತೋರುವುದಿಲ್ಲ ಎಂದು ಹೇಳಿದರು.
ಎಫ್.ಡಿ.ಐ. ಬಂದರೆ ಸಾಮಾಜಿಕ ಹಾಗೂ ವೈಯಕ್ತಿಕ ಸಂಬಂಧಗಳಿರುವುದಿಲ್ಲ. ವರ್ತಕನಿಗೂ, ಗ್ರಾಹಕನಿಗೂ ದೇಶದಲ್ಲಿರುವ ಭಾವನಾತ್ಮಕ ಸಂಬಂಧ ಕಳೆದು ಹೋಗುತ್ತದೆ ಎಂದ ಸಿ.ಟಿ. ರವಿ, ಪ್ರಪಂಚದ ಕೇವಲ 84 ಶ್ರೀಮಂತರ ಶ್ರೀಮಂತಿಕೆಯನ್ನು ಹಂಚಿದರೆ ಪ್ರಪಂಚದ ಬಡತನ ದೂರವಾಗುತ್ತದೆ ಎಂದರು.
ವರ್ತಕರೂ ಮುಖ್ಯ: ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮಾತನಾಡಿ, ರೈತರಷ್ಟೇ ದೇಶಕ್ಕೆ ವರ್ತಕರೂ ಮುಖ್ಯ. ರೈತರಿಗೆ ಪ್ರೋತ್ಸಾಹ ನೀಡಬೇಕಾದವರು ವರ್ತಕರು. ಈ ಗುರುತರ ಜವಾಬ್ದಾರಿಯನ್ನು ವರ್ತಕರು ನಿಭಾಯಿಸುತ್ತಿದ್ದಾರೆ ಎಂದವರು ಹೇಳಿದರು.
ವರ್ತಕರ ಹಕ್ಕುಗಳನ್ನು ಪ್ರತಿಪ್ರಾದಿಸಲು ಒಗ್ಗಟ್ಟು ತೋರಿಸಬೇಕು. ಸಂಖ್ಯಾಬಲದ ಶಕ್ತಿ ತೋರಿಸಿ, ವರ್ತಕರು ರಾಜಕೀಯ ಬದಲಾವಣೆ ಮಾಡಬಹುದೆಂಬುವುದು ಸಂಬಂಧಪಟ್ಟವರಿಗೆ ಗೊತ್ತಾಗುವಂತೆ ಮಾಡಬೇಕು. ಯಾರನ್ನು ಬೇಕಾದರೂ ಇಳಿಸುವ, ಹತ್ತಿಸುವ ಶಕ್ತಿ ವರ್ತಕರಿಗೆ ಎಂದು ತಿಳಿಸಿದರು.
ವರ್ತಕರು ಆಥರ್ಥಿಕವಾಗಿ ಸದೃಢರಾಗಿ ವರ್ತಕರ ಕುಟುಂಬಗಳಿಗೆ ಆರೋಗ್ಯ ವಿಮಾ ಸೌಲಭ್ಯ ದೊರಕಲು ಯಶಸ್ವಿನಿ ಯೋಜನೆ ಅಗತ್ಯವಾಗಿದೆ. ಇದಕ್ಕಾಗಿ ವರ್ತಕರು ಸಹಕಾರಿ ಸಂಘ ರಚಿಸಿಕೊಳ್ಳಲು ತಾವು ನೆರವಾಗುವುದಾಗಿ ಧರ್ಮೇಗೌಡ ತಿಳಿಸಿದರು.
ವರ್ತಕರ ಸಂಘದ ಅಧ್ಯಕ್ಷ ಜಿ.ಎ. ದಿನೇಶ್ ಗುಪ್ತ ಪ್ರಾಸ್ತವಿಕವಾಗಿ ಮಾತನಾಡಿ, ರೈತನಷ್ಟೇ ದೇಶಕ್ಕೆ ಬೆನ್ನೆಲುಬಾಗಿ ವರ್ತಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ವರ್ತಕರ ಬೇಡಿಕೆಗಳತ್ತ ಸರ್ಕಾರಗಳು ಆಸಕ್ತಿ ತೋರುತ್ತಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚುತ್ತಿರುವ ಪೈಪೋಟಿ, ಎಫ್.ಡಿ.ಐ, ಬೃಹತ್ ಮಾಲ್‌ಗಳ ಹಾವಳಿಯಿಂದ ವರ್ತಕರು ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ ಎಂದರು.
ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಕೆ.ಎಸ್. ನಾಗೇಶ್, ಸಿ.ಆರ್. ರಮೇಶ್, ಟಿ.ಎಸ್. ಅಶೋಕ್ ಕುಮಾರ್ ಉಪಸ್ಥಿತರಿದ್ದರು.