ಬರ ನಿರ್ವಹಣೆಗೆ ಬಂತು ಅನುದಾನ
ಚಿಕ್ಕಮಗಳೂರು: ಬರಕ್ಕೆ ತುತ್ತಾಗಿರುವ 98 ತಾಲೂಕುಗಳಿಗೆ ರಾಜ್ಯ ಸರ್ಕಾರ ರು. 20.10 ಕೋಟಿ ಬಿಡುಗಡೆ ಮಾಡಿದ್ದು,
ಬಜೆಟ್ ಮಂಡಿಸಿದ ಮೂರೇ ದಿನದಲ್ಲಿ ಅಂದರೆ, ಫೆ. 17ರಂದು ಎರಡು ಕಂತುಗಳಲ್ಲಿ ಹಣ ಬಿಡುಗಡೆಯಾಗಿದೆ.
ಮೊದಲನೇ ಕಂತಿನಲ್ಲಿ 34 ತಾಲೂಕುಗಳಿಗೆ ರು. 6.60 ಕೋಟಿ ಮಂಜೂರು ಮಾಡಲಾಗಿದ್ದು, ಹೆಚ್ಚಿನ ಪಾಲು ತಾಲೂಕುಗಳಿಗೆ ತಲಾ ರು. 10 ಲಕ್ಷ ಹಂಚಲಾಗಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿಗೆ ಅತೀ ಹೆಚ್ಚು ಅಂದರೆ ರು. 60 ಲಕ್ಷ ನೀಡಲಾಗಿದೆ.
14 ಜಿಲ್ಲೆಗೆ ಮಂಜೂರು: ಎರಡನೇ ಕಂತಿನಲ್ಲಿ ರು. 13.50 ಕೋಟಿಯನ್ನು 14 ಜಿಲ್ಲೆಗಳಿಗೆ ಮಂಜೂರು ಮಾಡಲಾಗಿದ್ದು, ಈ ಪೈಕಿ ಪ್ರಥಮ ಕಂತು ಪಡೆದ 7 ಜಿಲ್ಲೆಗಳು ಮತ್ತೆ ಎರಡನೇ ಕಂತಿನಲ್ಲಿ ಹಣ ಪಡೆದುಕೊಂಡಿದೆ. ಬೆಳಗಾವಿ ಜಿಲ್ಲೆಗೆ ರು. 200 ಲಕ್ಷ, ಬಾಗಲಕೋಟೆ ಜಿಲ್ಲೆಗೆ ರು. 220 ಲಕ್ಷ ುಪಾಯಿ ಬರ ನಿರ್ವಹಣೆಗೆ ನೀಡಲಾಗಿದ್ದು, ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಅತಿ ಹೆಚ್ಚು ಅನುದಾನ ಪಡೆದುಕೊಂಡಿರುವ ಜಿಲ್ಲೆಗಳು ಇವುಗಳಾಗಿವೆ.
ಒಂದೇ ದಿನ ಎರಡು ಕಂತು: 2012-13 ನೇ ಸಾಲಿನಲ್ಲಿ ಸಕಾಲದಲ್ಲಿ ಮುಂಗಾರು ಬಾರದೆ ರಾಜ್ಯದ 154 ತಾಲೂಕುಗಳಲ್ಲಿ ಬರಗಾಲ ಬಂದಿತ್ತು. 2013-14ನೇ ಸಾಲಿನಲ್ಲಿ ರಾಜ್ಯದ ಕೆಲವೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಆದರೆ, ಕೆಲವು ಕಡೆಗಳಲ್ಲಿ ವಾಡಿಕೆಯಷ್ಟು ಮಳೆ ಬಾರದೆ ರೈತರು ಬೆಳೆಗಳನ್ನು ಕಳೆದುಕೊಂಡರು.
ಸತತವಾಗಿ 2-3 ವರ್ಷಗಳಿಂದ ಕೆಲವು ತಾಲೂಕುಗಳಲ್ಲಿ ಬರ ಬರುತ್ತಲೇ ಇದೆ. ಇಂತಹ ಕಡೆಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ ನಿರಂತರವಾಗಿ ಮುಂದುವರೆದಿದೆ. ಕಳೆದ ಬಾರಿಯೂ ಸಹ ಮುಂಗಾರು ಕೈಕೊಟ್ಟಿತ್ತು. ಇದರಿಂದಾಗಿ ರಾಜ್ಯ ಸರ್ಕಾರ ಪ್ರಥಮ ಹಂತದಲ್ಲಿ 64 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿತು. ಎರಡನೇ ಹಂತದಲ್ಲಿ ಅಂದರೆ ಡಿಸೆಂಬರ್ 12 ರಂದು ಮತ್ತೆ 34 ತಾಲೂಕುಗಳು ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಕೊಂಡವು.
ಬಿಡುಗಡೆ ಮಾಡಿರಲಿಲ್ಲ: ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ 98 ತಾಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿತಾದರೂ, ಇದರ ನಿರ್ವಹಣೆಗೆ ಒಂದೂ ರುಪಾಯಿ ಸಹ ಬಿಡುಗಡೆ ಮಾಡಿರಲಿಲ್ಲ.
ಬರ ಪೀಡಿತ ತಾಲೂಕುಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಕುಡಿಯುವ ನೀರು, ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ತೊಟ್ಟಿ ನಿರ್ಮಾಣ, ಮೇವು ಖರೀದಿ ಸೇರಿದಂತೆ ಇತರೆ ಅಗತ್ಯ ತುರ್ತು ಕೆಲಸ ಕೈಗೊಳ್ಳಲು ಶಾಸಕರ ಅಧ್ಯಕ್ಷತೆಯಲ್ಲಿರುವ ಟಾಸ್ಕ್ ಪೋರ್ಸ್ ಸಮಿತಿಗಳು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದವು.
ಬೇಸಿಗೆ ಕಾಲ ಆರಂಭವಾದರೂ ಸರ್ಕಾರದಿಂದ ಬರ ನಿರ್ವಹಣೆಗೆ ಹಣ ಬಿಡುಗಡೆಯಾಗಿರಲಿಲ್ಲ. ಮುಂದೆ ಎದುರಾಗಲಿರುವ ಭೀಕರ ಪರಿಸ್ಥಿತಿಯನ್ನು ಎದುರಿಸುವುದು ಹೇಗೆಂಬ ಪ್ರಶ್ನೆ ಜಿಲ್ಲಾಡಳಿತಕ್ಕೆ ಕಾಡಲು ಆರಂಭಿಸಿತ್ತು.
ಸರ್ಕಾರ ಎರಡು ಹಂತದಲ್ಲಿ ಬರ ಪೀಡಿತ ತಾಲೂಕುಗಳನ್ನು ಘೋಷಣೆ ಮಾಡಿತಾದರೂ, ಒಂದೇ ದಿನದಂದು ಎರಡು ಕಂತುಗಳಲ್ಲಿ ಬರ ನಿರ್ವಹಣೆಗೆ ಅನುದಾನ ಬಿಡುಗಡೆ ಮಾಡಿದೆ.
ಹೆಚ್ಚು ಹಣ ಬಿಡುಗಡೆ: ಮೊದಲ ಕಂತಿನಲ್ಲಿ 34 ತಾಲೂಕುಗಳಿಗೆ ರು. 6.60 ಕೋಟಿ ಬಿಡುಗಡೆ ಮಾಡಿ, ಅದೇ ದಿನದಂದು 14 ಜಿಲ್ಲೆಗಳಿಗೆ ರು. 13.50 ಕೋಟಿ ಬಿಡುಗಡೆಯಾಗಿದೆ. 7 ಜಿಲ್ಲೆಗಳು ಒಂದೇ ದಿನದಂದು ಎರಡೆರಡು ಕಂತುಗಳಲ್ಲಿ ಹಣವನ್ನು ಪಡೆದುಕೊಂಡಿವೆ. ಅವುಗಳ ವಿವರ ಈ ರೀತಿ ಇದೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಗುಲ್ಬರ್ಗಾ, ಯಾದಗಿರಿ, ಬಾಗಲಕೋಟೆ, ಚಿಕ್ಕಮಗಳೂರು, ಹಾಸನ.
ಈ ಅನುದಾನವನ್ನು ತುರ್ತು ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಮಾತ್ರ ವೆಚ್ಚ ಮಾಡುವುದು. ಅನುದಾನ ಲಭ್ಯತೆ ಇಲ್ಲದೇ ಯಾವುದೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಬಾರದು. ಪ್ರಕೃತಿ ವಿಕೋಪದಿಂದ ಆದ ವಿಪತ್ತು ಹಾನಿಗೆ ಮಾತ್ರ ಪರಿಹಾರ ನೀಡಲು ಬಳಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.
-ಆರ್. ತಾರಾನಾಥ್