ಸಂಗೀತ ಒಲಿಸಿಕೊಳ್ಳಲು ಸಾಧನೆ ಅಗತ್ಯ
ಕ.ಪ್ರ.ವಾರ್ತೆ, ತರೀಕೆರೆ, ಫೆ.25 ಸಂಗೀತ ಒಲಿಸಿಕೊಳ್ಳಲು ಸಾಧನೆ ಅಗತ್ಯವಾಗಿದೆ ಎಂದು ಭದ್ರಾವತಿ ಅಕಾಶವಾಣಿ ನಿಲಯ ಮುಖ್ಯ ಕಾರ್ಯಕ್ರಮ ನಿರ್ವಾಹಕ ಡಾ. ಎ.ಎಸ್. ಶಂಕರನಾರಾಯಣ ತಿಳಿಸಿದ್ದಾರೆ.
ಅವರು, ಶ್ರೀವತ್ಸ ಭಜನಾ ಮಂಡಳಿ, ಶ್ರೀನಿವಾಸ ಸಂಗೀತ ಪಾಠಶಾಲೆ ವತಿಯಿಂದ ಪಟ್ಟಣದ ಸುಬ್ರಹ್ಮಣ್ಯೇಶ್ವರ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ 7ನೇ ವರ್ಷದ ತ್ಯಾಗರಾಜರ ಮತ್ತು ದಾಸ ವರೇಣ್ಯರ ಆರಾಧಾನ ಮಹೋತ್ಸವದ ಉದ್ಘಾಟಿಸಿ ಮಾತನಾಡಿದರು.
ಸಂಗೀತ ನೆರವು: ಶ್ರೇಷ್ಠ ವಾಗ್ಗೇಯಕಾರರನ್ನು ಅವರ ಕೃತಿಗಳ ಮೂಲಕ ನೆನಪಿಸಿಕೊಳ್ಳಬೇಕು. ಭಕ್ತಿ ಸಾಹಿತ್ಯ ಆಧ್ಯಾತ್ಮಿಕ ಸಾಧನೆಗೆ ಪ್ರೇರಣೆಯಾಗಿದೆ, ಶ್ರೇಷ್ಠ ಅನುಭಾವಿ ಪರಂಪರೆ ಈ ಸಂಸ್ಕೃತಿಯನ್ನು ಮುಂದುವರೆಸಲು ಸಂಗೀತ ನೆರವಾಗುತ್ತದೆ ಎಂದು ತಿಳಿಸಿದರು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎ.ವಿ. ನಾಗಭೂಷಣ್, ಕಲಾವಿದ ಎಸ್. ಸೋಮು ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಶ್ರೀನಿವಾಸ ಸಂಗೀತ ಪಾಠಶಾಲೆಯ ಜೂನಿಯರ್ ವಿಭಾಗದ ವಿದ್ಯಾರ್ಥಿ ಅಭಿಷೇಕ್ ಮತ್ತು ದೀಪ್ತಿ ಚಿನಿವಾರ್ ಅವರುಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು. ಶ್ರೀವತ್ಸ ಭಜನಾ ಮಂಡಳಿ ಮಾತೆಯರಿಂದ ಭಜನೆ ಹಾಡುಗಾರಿಕೆ, ಶ್ರೀನಿವಾಟ ಸಂಗೀತ ಪಾಠಶಾಲೆ ವತಿಯಿಂದ ನೃತ್ಯ, ಕೋಲಾಟ, ಏರ್ಪಡಿಸಲಾಗಿತ್ತು.
ಶಾರದಾ ಸತ್ಸಂಗದ ಶಾಂತ ರೇವಣ್ಣ ಅವರು ದಾಸರ ಪದಗಳ ಹಾಡಿದರು. ವೀಣಾ ಕಲಾವಿದ ಎಸ್.ಸೋಮು ಅವರಿಗೆ ಗುರುವಂದನೆ ಏರ್ಪಡಿಸಲಾಗಿತ್ತು. ಲತಾ ಗೋಪಾಲಕೃಷ್ಣ, ವಿಜಯಪ್ರಕಾಶ್, ಶ್ರೀವತ್ಸ ಭಜನಾ ಮಂಡಳಿ ಮಾತೆಯರು ಮತ್ತು ಶ್ರೀನಿವಾಸ ಸಂಗೀತ ಪಾಠಶಾಲೆಯ ಸದಸ್ಯರು ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗವಹಿಸಿದ್ದರು.