ಇನಾಂ ಭೂಮಿ ಕುರಿತು ಸಿಎಂ ಚರ್ಚೆ
ಚಿಕ್ಕಮಗಳೂರು: ಕಳಸದ ಇನಾಂ ಭೂಮಿ ಒತ್ತುವರಿದಾರರ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದ್ದಾರೆ.
ಇಲ್ಲಿನ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಅವರು ಇದಕ್ಕೆ ಸ್ಪಂದಿಸಿ, ಮುಂದಿನ ಸಾಧಕ- ಬಾಧಕಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಬುಧವಾರ ತಿಳಿಸಿದರು.
ಇಲ್ಲಿನ ಸಮಸ್ಯೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲು ಜೆಡಿಎಸ್ ಮತ್ತು ಬಿಜೆಪಿ ಮುಂದಾಗಿವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಧರಣಿ ಕುಳಿತ ವಿಷಯ ತಿಳಿಯುತ್ತಿದ್ದಂತೆ ಸಿ.ಟಿ.ರವಿ ಸ್ಥಳಕ್ಕೆ ಹೋಗಿ ಧರಣಿಗೆ ಕುಳಿತರು ಎಂದು ಹೇಳಿದ ವಿಜಯಕುಮಾರ್, ಅಂದಿನ ಈ ಬೆಳವಣಿಗೆಯನ್ನು ಹೆಣ ಮತ್ತು ಹದ್ದಿಗೆ ಹೋಲಿಕೆ ಮಾಡಿದರು.
ಪದಾಧಿಕಾರಿಗಳ ಸಭೆ: ಚುನಾವಣೆ ಸಮೀಪಿಸುತ್ತಿದೆ, ಇದರಲ್ಲಿ ಲಾಭ ಹುಡುಕಲು ಪ್ರತಿಪಕ್ಷಗಳು ಸ್ಪರ್ಧೆಗೆ ಇಳಿದಿವೆ. ಇನಾಂ ಭೂಮಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನವನ್ನು ಸರ್ಕಾರ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಲಿದೆ.
ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗಾಗಿ ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಳ್ಳುವ ಮೂಲಕ ಚಾಲನೆ ನೀಡಲಾಗಿದೆ. ಹೋಬಳಿ ಮತ್ತು ಬೂತ್‌ಮಟ್ಟದಲ್ಲಿ ಪದಾಧಿಕಾರಿಗಳ ಸಭೆಗಳನ್ನು ಕರೆಯಲಾಗುತ್ತಿದೆ ಎಂದರು.
19 ಟವರ್ ಮಂಜೂರು: ಜಯಪ್ರಕಾಶ್ ಹೆಗ್ಡೆ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪರ ಕೆಲಸಗಳನ್ನು ಎರಡು ಜಿಲ್ಲೆಗಳಲ್ಲೂ ಮಾಡಿದ್ದಾರೆ, ಪಿಎಂಜಿಎಸ್‌ವೈ ಯೋಜನೆಯಡಿ 36.15 ಕೋಟಿ, ಬರ ಮತ್ತು ನೆರೆ ಹಾವಳಿಗೆ 34.53 ಕೋಟಿ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲು 4 ಕೋಟಿ, ರಾಷ್ಟ್ರೀಯ ಹೆದ್ದಾರಿಗೆ ಅನುದಾನ ತಂದಿದ್ದಾರೆ. ಜಿಲ್ಲೆಗೆ ಹೊಸದಾಗಿ 3 ಎಫ್.ಎಂ. ಸ್ಟೇಷನ್ ಮಂಜೂರಾಗಿವೆ. ಕಳೆದ 3 ವರ್ಷಗಳಲ್ಲಿ 19 ಟವರ್‌ಗಳು ಮಂಜೂರಾಗಿವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಎನ್. ಮಹೇಶ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರ್ ಉರಾಳ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಂಗೇಗೌಡ ಉಪಸ್ಥಿತರಿದ್ದರು.