ಮಲೆನಾಡಿಗೆ ವಿಶೇಷ ಪ್ಯಾಕೇಜ್‌ಗೆ ಒತ್ತಾಯ
ವಿಧಾನಸಭೆ: ಮಲೆನಾಡು ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಶೃಂಗೇರಿ ಶಾಸಕ ಜೀವರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಜೆಟ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೆನಾಡಿನ ಜಿಲ್ಲೆಗಳು ಹಲವು ವಿಧದ ಸಮಸ್ಯೆ ಅನುಭವಿಸುತ್ತಿವೆ. ಆದರೆ ಸರ್ಕಾರ ಈ ಬಗ್ಗೆ ಕಿಂಚಿತ್ ಗಮನ ನೀಡುತ್ತಿಲ್ಲ. ಪರಮಾಧಿಕಾರವನ್ನು ಹೊಂದಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಲೆನಾಡು ಜಿಲ್ಲೆಗಳತ್ತ ಕೃಪೆ ತೋರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಲೆನಾಡಿನ ಅಡಕೆ ಬೆಳೆಗೆ ಹಳದಿ ಎಲೆ ರೋಗ ಇದೆ. ಇದಕ್ಕಾಗಿ ರು. 1400 ಕೋಟಿ ನೀಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಯ್ಯಾಪೈಸೆ ಬಿಡುಗಡೆ ಮಾಡಿಲ್ಲ. ಅದಕ್ಕೆ ಬದಲಾಗಿ ಎಲ್ಲ ತೋಟಗಾರಿಕಾ ಬೆಳೆಗಳನ್ನು ಸೇರಿಸಿ ಅವುಗಳ ಅಭಿವೃದ್ಧಿಗೆ ರು. 1470 ಕೋಟಿ ನಿಗದಿ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ನಾಯಕರು ಗೋರಕ್‌ಸಿಂಗ್ ವರದಿ ಪ್ರಕಾರ ಅಡಕೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ವಾಸ್ತವವಾಗಿ ಈ ವರದಿಯನ್ನು ಸಂಸತ್‌ನಲ್ಲಿ ಮಂಡಿಸಿ ಒಪ್ಪಿಗೆ ಪಡೆದುಕೊಂಡಿಲ್ಲ. ಆದರೂ ಜನರನ್ನು ತಪ್ಪು ದಾರಿಗೆ ಎಳೆಯಲು ಈ ವರದಿ ಹೆಸರು ಹೇಳಿ ಚರ್ಚೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.
ಅಷ್ಟು ಮಾತ್ರವಲ್ಲ ಮಲೆನಾಡು ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಜನರನ್ನು ತೀವ್ರ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಸಾಗುವಾಳಿ ಚೀಟಿ ಇದ್ದರೂ ಒಕ್ಕಲೆಬ್ಬಿಸುತ್ತಿದ್ದಾರೆ. 10 ಎಕರೆ ಮೇಲ್ಪಟ್ಟು ಒತ್ತುವರಿದಾರರನ್ನು ತೆರವು ಮಾಡಬೇಕು ೆಂದು ಅರಣ್ಯ ಸಚಿವರು ಆದೇಶ ನೀಡಿದ್ದರು, ಅರ್ಧ ಎಕರೆ, ಒಂದು ಎಕರೆ ಒತ್ತುವರಿ ಮಾಡಿಕೊಂಡವರನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹೃದಯ ಅರಳಬೇಕು : ಇದರಿಂದ ಕೆರಳಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಆಡಳಿತ ನಡೆಸುವವರು ಹೃದಯಶೂನ್ಯರಾಗಬಾರದು. ಸಮಸ್ಯೆಗಳನ್ನು ಕಂಡಾಗ ಹೃದಯ ಅರಳಬೇಕು.
ನೀವೆಲ್ಲ ಮಲೆನಾಡು ಭಾಗದ ಶಾಸಕರು ಅಧಿವೇಶನ ಮುಗಿಯುವಾಗ ಇಂಥ ವಿಚಾರ ಗಮನಕ್ಕೆ ತರುತ್ತೀರಿ. ಮೊದಲೇ ಮಾತನಾಡುವುದಕ್ಕೆ ಏನಾಗಿದೆ. ತಕ್ಷಣ ನೀವೆಲ್ಲರೂ ಒಂದಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆಯ ಗಂಭೀರತೆಯನ್ನು ಅರ್ಥಮಾಡಿಸಿಕೊಡಿ ಎಂದರು.