ಸಕಾಲದಲ್ಲಿ ತೆರಿಗೆ ಪಾವತಿಸಿದರೆ ಅಭಿವೃದ್ಧಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಫೆ.26
ಸಕಾಲದಲ್ಲಿ ವಿವಿಧ ತೆರಿಗೆಗಳನ್ನು ಪಾವತಿಸುವುದರಿಂದ ನಗರದ ಅಭಿವೃದ್ಧಿಯ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಹಕಾರಿ ಆಗುತ್ತದೆ ಎಂದು ಪೌರಾಯುಕ್ತ ನಾಗಭೂಷಣ್ ಹೇಳಿದ್ದಾರೆ.
ಹಿರೇಮಗಳೂರಿನಲ್ಲಿ ಬುಧವಾರ ನಗರಸಭೆಯಿಂದ ಆಯೋಜಿಸಿದ್ದ ತೆರಿಗೆ ವಸೂಲಾತಿ ಆಂದೋಲನದಲ್ಲಿ ತೆರಿಗೆ ಪಾವತಿಸಿದ ನಾಗರಿಕರಿಗೆ ರಶೀದಿಗಳನ್ನು ವಿತರಿಸಿ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರ ತೆರಿಗೆ ಹಣದಿಂದಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಮನೆ, ನೀರು, ವ್ಯಾಪಾರ ಉದ್ಯಮ ಸೇರಿದಂತೆ ವಿವಿಧ ತೆರಿಗೆಗಳನ್ನು ನಾಗರಿಕರು ಸಕಾಲದಲ್ಲಿ ಪಾವತಿಸಬೇಕು ಎಂದು ಮನವಿ ಮಾಡಿದರು.
ನಗರಸಭೆ ಸದಸ್ಯ ಎಚ್.ಎಸ್.ಪುಟ್ಟಸ್ವಾಮಿ ಮಾತನಾಡಿ, ತೆರಿಗೆ ವಸೂಲಾತಿಗೆ ಇದೊಂದು ಒಳ್ಳೆಯ ಕಾರ್ಯಕ್ರಮ. ಕೆಲಸಗಳ ಒತ್ತಡದಿಂದಾಗಿ ಜನರು ಮನೆ, ನೀರು ಕಂದಾಯಗಳನ್ನು ಪಾವತಿಸುವ ಕಡೆಗೆ ಗಮನ ಕೊಡುವುದಿಲ್ಲ. ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರನ್ನು ಜಾಗೃತಗೊಳಿಸುವುದರ ಜತೆಗೆ ತೆರಿಗೆ ಸಂಗ್ರಹ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಅಭಿನಂದನೆ: ಸ್ಥಳೀಯ ಸಂಸ್ಥೆಗಳು ತೆರಿಗೆಗಳನ್ನೇ ಅವಲಂಬಿಸಿಕೊಂಡಿವೆ. ಜನರು ನಿಗದಿತ ಅವಧಿಯಲ್ಲಿ ತೆರಿಗೆಗಳನ್ನು ಪಾವತಿ ಮಾಡುವುದರಿಂದ ಮೂಲ ಸೌಕರ್ಯಗಳನ್ನು ನೀಡಲು ಅನುಕೂಲವಾಗುತ್ತದೆ. ಜತೆಗೆ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸದೃಢವಾಗಿರುತ್ತವೆ. ನೀರು, ಬೀದಿದೀಪ, ರಸ್ತೆ, ಚರಂಡಿ, ಉದ್ಯಾನ ಅಭಿವೃದ್ಧಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಹಕಾರಿಯಾಗುತ್ತದೆ. ಆಂದೋಲನದ ಮೂಲಕ ಅರ್ಧ ಕೋಟಿಗೂ ಹೆಚ್ಚಿನ ತೆರಿಗೆ ಸಂಗ್ರಹಿಸಿರುವ ಅಧಿಕಾರಿಗಳನ್ನು ಅಭಿನಂದಿಸಿದರು.
ಕಂದಾಯಾಧಿಕಾರಿ ಪಿ.ಗುರುಮೂರ್ತಿ ಮಾತನಾಡಿ, ಆಂದೋಲನಕ್ಕೆ ಉತ್ತಮ ಸ್ಪಂದನೆ ಜನರಿಂದ ವ್ಯಕ್ತವಾಗುತ್ತಿದೆ. ಈಗಾಗಲೇ 62 ಲಕ್ಷಕ್ಕೂ ಅಧಿಕ ತೆರಿಗೆಯನ್ನು ಆಂದೋಲನದ ಮೂಲಕ ಸಂಗ್ರಹಿಸಲಾಗಿದೆ. ಎಲ್ಲ ವಾರ್ಡ್ಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, 1 ಕೋಟಿಗೂ ಹೆಚ್ಚಿನ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಮಾಹಿತಿ: ನಗರಸಭೆ ಸದಸ್ಯ ಪುಟ್ಟಸ್ವಾಮಿ, ಕಂದಾಯಾಧಿಕಾರಿ ಪಿ. ಗುರುಮೂರ್ತಿ, ಅಂಬೇಡ್ಕರ್ ಯುವಜನ ಸಂಘ ಅಧ್ಯಕ್ಷ ಎಚ್.ಸಿ. ಗಂಗಾಧರ್, ನವಚೇತನ ಯುವಕ ಸಂಘ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಜಗದೀಶ್, ಶ್ರೀದೇವಿ ಯುವಕ ಸಂಘ ಅಧ್ಯಕ್ಷ ಬಿ.ಎನ್. ಮೋಹನ್ಕುಮಾರ್ ಮತ್ತು ನಗರಸಭೆ ಸಿಬ್ಬಂದಿ ಬಡಾವಣೆಯ ಬೀದಿಗಳಲ್ಲಿ ಸಂಚರಿಸಿ ತೆರಿಗೆ ಪಾವತಿ ಬಗ್ಗೆ ಅರಿವಿನೊಂದಿಗೆ ಮಾಹಿತಿಗಳನ್ನು ನೀಡಿದರು.
ಅಂಬೇಡ್ಕರ್ ಯುವಜನ ಸಂಘದ ಎಚ್.ಎನ್. ಸುರೇಶ್, ಎಚ್.ಪಿ. ಧರ್ಮರಾಜು, ಎಚ್.ಎಸ್. ರವಿಕುಮಾರ್, ವಾಮನ ಗ್ರೂಪ್ಸ್ ಕೇಶವಮೂರ್ತಿ, ಮುಖಂಡ ಎಚ್.ಆರ್. ಚಂದ್ರಪ್ಪ, ಕಂದಾಯ ನಿರೀಕ್ಷಕ ರಮೇಶ್ ನಾಯ್ಡು, ಮಮತಾ, ಸಿಬ್ಬಂದಿ ಧರ್ಮೇಗೌಡ, ಮರಿಯಪ್ಪ, ಮಂಜುನಾಥ್, ನಾಗರಾಜ್, ವಿಶಾಲಾಕ್ಷಿ, ಮೀನಾಕುಮಾರಿ ಇದ್ದರು. ಈ ವಾರ್ಡಿನಲ್ಲಿ 50 ಸಾವಿರಕ್ಕೂ ಹೆಚ್ಚಿನ ತೆರಿಗೆ ಸಂಗ್ರಹವಾಯಿತು.