ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಾಫಿ ಕಣಿವೆಯಲ್ಲಿ ಓಂಕಾರ ನಾದ...

Mainashree
Updated On : 28 Feb 2014, 1:12 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಫೆ.27
ಮಹಾಶಿವರಾತ್ರಿ ಹಬ್ಬವನ್ನು ಕಾಫಿ ಕಣಿವೆ ಚಿಕ್ಕಮಗಳೂರಿನಲ್ಲಿ ಗುರುವಾರ ಭಕ್ತರು ಶ್ರದ್ಧಾ- ಭಕ್ತಿಯಿಂದ ಆಚರಿಸಿದರು.
ಹಬ್ಬದ ಪ್ರಯುಕ್ತ ಮುಂಜಾನೆಯಿಂದಲೇ ನಗರದ ಶಿವಾಲಯಗಳಿಗೆ ತೆರಳಿದ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಕೆಲ ಶಿವಾಲಯಗಳಲ್ಲಿ ಹಬ್ಬದ ಅಂಗವಾಗಿ ರುದ್ರಹೋಮ, ಅಭಿಷೇಕ, ವಿಶೇಷ ಪೂಜೆ ಜರುಗಿತು. ಸಂಜೆ ಆಗುತ್ತಿದ್ದಂತೆ ನಗರದ ಶಿವಾಲಯಗಳಲ್ಲಿ ಭಕ್ತರ ದಂಡೆ ನೆರೆದಿತ್ತು.
ಪೂಜೆ: ಇತಿಹಾಸ ಪ್ರಸಿದ್ಧ ಶ್ರೀಬೋಳರಾಮೇಶ್ವರ ದೇವಾಲಯ ಸೇರಿದಂತೆ ಪ್ರಮುಖ ಶಿವಾಲಯಗಳ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನಕ್ಕಾಗಿ ಸಾಲು ಗಟ್ಟಿ ನಿಂತಿದ್ದರು. ಶ್ರೀಬೋಳರಾಮೇಶ್ವರ ದೇವಾಲಯದಲ್ಲಿ ರಾತ್ರಿ 8 ಗಂಟೆಗೆ ಆರಂಭಗೊಂಡ ರುದ್ರಾಭಿಷೇಕ, ಬೆಳಗಿನ ಜಾವದವರೆಗೂ ನಿರಂತರವಾಗಿ 4 ಯಾಮಗಳಲ್ಲೂ ನಡೆಯಿತು. ಶುಕ್ರವಾರ ಬೆಳಿಗ್ಗೆ ಸೂರ್ಯೋದೋಯಕ್ಕೆ ಸರಿಯಾಗಿ ಮಹಾಮಂಗಳಾರತಿ ನಡೆದು ನಂತರ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.
ಬಾಳೆಹೊನ್ನೂರು:  ಪಟ್ಟಣ ಹಾಗೂ ಹೋಬಳಿಯಾದ್ಯಂತ ಗುರುವಾರ ಮಹಾ ಶಿವರಾತ್ರಿಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದ್ದು, ಎಲ್ಲೆಲ್ಲೂ ಶಿವನಾಮ ಸ್ಮರಣೆ ನಡೆದಿದೆ. ದೇವಾಲಯಗಳಲ್ಲಿ 'ಓಂ ನಮಃ ಶಿವಾಯ' ಮಂತ್ರಘೋಷಗಳು ಮೊಳಗಿದವು.
ಶಿವರಾತ್ರಿ ಪ್ರಯುಕ್ತ ಸುತ್ತಮುತ್ತಲಿನ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಏಕದಶವಾರ ರುದ್ರಾಭಿಷೇಕ, ರುದ್ರಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಸ್ಥಳೀಯ ಮಾರ್ಕಂಡೇಶ್ವರ ದೇವಸ್ಥಾನ, ರಂಭಾಪುರಿ ಪೀಠದ ವೀರಭದ್ರೇಶ್ವರ, ಇಟ್ಟಿಗೆ ಸೀಗೋಡಿನ ಈಶ್ವರ ದೇವಸ್ಥಾನ ಹಾಗೂ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಪುರಾಣ ಪ್ರಸಿದ್ಧ ಖಾಂಡ್ಯ ಮಾರ್ಕಂಡೇಶ್ವರ ದೇವಸ್ಥಾನಗಳಲ್ಲಿ ಶಿವನಿಗೆ ವಿಶೇಷ ಅಭಿಷೇಕಗಳನ್ನು ನೆರವೇರಿಸಿ ಅಲಂಕಾರ, ಪೂಜೆ, ಪುನಸ್ಕಾರಗಳನ್ನು ಮಾಡಲಾಯಿತು.
ಭಕ್ತರ ಮಹಾಪೂರ: ಎಲ್ಲೆಡೆ ಶಿವನ ದೇವಸ್ಥಾನಗಳ ಮುಂಭಾಗ ಅಕ್ಕಿ ಹಾಗೂ ಬತ್ತವನ್ನಿಟ್ಟು ಅದರ ಮೇಲ್ಭಾಗದಲ್ಲಿ ಕುಂಬಳಕಾಯಿ ಕಡಿದು ಎಳ್ಳೆಣ್ಣೆ, ಎಳ್ಳು ಹಾಕಿ ದೀಪ ಹಚ್ಚಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಬ್ಬದ ಪ್ರಯುಕ್ತ ದೇವಾಲಯಗಳಲ್ಲಿ ಭಕ್ತರ ಮಹಾಪೂರವೇ ಹರಿದಿತ್ತು. ಹಲವೆಡೆ ರಾತ್ರಿ ಶಿವರಾತ್ರಿ ಜಾಗರಣೆ ಆಚರಣೆಗೆ ಸಿದ್ಧತೆಗಳು ಭರದಿಂದ ನಡೆದವು. ಜಾಗರಣೆ ಅಂಗವಾಗಿ ಹಲವೆಡೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು.
ಮೂಡಿಗೆರೆಯಲ್ಲಿ...
ಮೂಡಿಗೆರೆ:  ಮಹಾಶಿವರಾತ್ರಿ ಹಬ್ಬದ ದಿನವಾದ ಗುರುವಾರ ಪಟ್ಟಣದಿಂದ 20 ಕಿ.ಮೀ. ದೂರದ ವಸ್ತಾರೆ ಹೋಬಳಿಗೆ ಸೇರಿದ ಕೂದುವಳ್ಳಿ ಗ್ರಾಮದ 4 ದಿಕ್ಕುಗಳಲ್ಲಿರುವ ಕಳಸೇಶ್ವರ, ರಾಮೇಶ್ವರ, ಸೋಮೇಶ್ವರ, ಹರಿಹರೇಶ್ವರ ಮತ್ತು ಗೌತಮೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಕೂದುವಳ್ಳಿ ಗ್ರಾಮದ 4 ದಿಕ್ಕುಗಳಲ್ಲಿರುವ ಪಂಚಲಿಂಗ ದರ್ಶನವನ್ನು ಪಡೆಯಲು ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ತಂಡೋಪತಂಡವಾಗಿ ಆಗಮಿಸಿ ದರ್ಶನ ಪಡೆದರು.
15ನೇ ವರ್ಷದ ಸಂಭ್ರಮ: ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕನ್ನಾಪುರ ಇಂದಿರಾನಗರದ ಶ್ರೀ ಶನೈಶ್ಚರ ದೇವಾಲಯದಲ್ಲಿ 15ನೇ ವರ್ಷದ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ 9011 ದೀಪಗಳನ್ನು ಬೆಳಗುವುದರ ಮೂಲಕ ದೀಪಾರಾಧನೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಶ್ರೀಶನೈಶ್ಚರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯ ನಡೆಯಿತು. ಪಂಚಾಮೃತ ಅಭಿಷೇಕ ನೆರವೇರಿತು.
ದೇವಾಲಯದ ಆಡಳಿತಾಧಿಕಾರಿ ಎಂ.ವಿ. ರಾಜಶೇಖರ್ ಮತ್ತು ಗೀತಾರಾಜಶೇಖರ್ ಕುಟುಂಬ ವರ್ಗ ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಮಹಾಶಿವರಾತ್ರಿಯ ಅಂಗವಾಗಿ ದೇವಾಲಯದಲ್ಲಿ ಗಂಜಲಗೋಡಿನ ಶಾಂತೇಗೌಡ ಮತ್ತು ತಂಡದವರಿಂದ ಶ್ರೀ ಶನಿಪ್ರಭಾವ ಹರಿಕಥೆ ಜರುಗಿತು.
26 ದೇಗುಲಗಳಲ್ಲಿ ಪೂಜೆ:  ಮಹಾಶಿವರಾತ್ರಿ ಹಬ್ಬದ ದಿನವಾದ ಗುರುವಾರ ತಾಲೂಕಿನ ಕಳಸದ ಕಲಶೇಶ್ವರ, ದೇವವೃಂದದ ರಾಮೇಶ್ವರ, ಬೈರಾಪುರದ ನಾಣ್ಯದ ಬೈರವೇಶ್ವರ, ದೇವರ ಮನೆಯ ಕಾಲಬೈರವೇಶ್ವರ, ಹಳೇಮೂಡಿಗೆರೆಯ ಈಶ್ವರ, ಪಟ್ಟಣದ ಗಂಗಾಧರೇಶ್ವರ, ಮೇಗಲಪೇಟೆಯ ಬಸವೇಶ್ವರ ದೇಗುಲ ಸೇರಿದಂತೆ ಸುಮಾರು 26 ದೇವಾಲಯಗಳಲ್ಲಿ ಮೂರು ಜಾವದ ಪೂಜೆಗಳನ್ನು ನೆರವೇರಿಸಲಾಯಿತು. ಬೆಳಗಿನಿಂದಲೇ ಭಕ್ತರು ದೇವಾಲಯಗಳಿಗೆ ಆಗಮಿಸಿ ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement