ಶ್ರದ್ಧೆ, ಪ್ರಾಮಾಣಿಕತೆ, ಮಾನವೀಯತೆ ಅಳವಡಿಸಿಕೊಳ್ಳಿ: ಡಾ.ಕೃಷ್ಣೇಗೌಡ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು ಫೆ.27
ವೈದ್ಯಕೀಯ ಸಿಬ್ಬಂದಿ ಶ್ರದ್ಧೆ, ಪ್ರಾಮಾಣಿಕತೆ ಹಾಗೂ ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಕ್ಕಳ ತಜ್ಞ ಡಾ. ಜೆ.ಪಿ. ಕೃಷ್ಣೇಗೌಡ ಹೇಳಿದ್ದಾರೆ.
ನಗರದ ಲಯನ್ಸ್ ಭವನದಲ್ಲಿ ಬುಧವಾರ ಸಹ್ಯಾದ್ರಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನ ಐದನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರ ಪ್ರಜ್ಞೆ, ಸಮಯ ಪ್ರಜ್ಞೆ ಹಾಗೂ ಕರ್ತವ್ಯ ಪ್ರಜ್ಞೆ ಇದ್ದವರು ಉತ್ತಮ ವ್ಯಕ್ತಿ ಎನಿಸಿಕೊಳ್ಳಲು ಸಾಧ್ಯ. ಸೇವೆಯಲ್ಲಿ ತೊಡಗಿಸಿಕೊಂಡಾಗ ಸಮಾಜ ನಮ್ಮನ್ನು ಗುರುತಿಸುತ್ತದೆ. ನಾವು ಯಾರನ್ನೂ ಹುಡುಕಿಕೊಂಡು ಹೋಗುವ ಅಗತ್ಯವಿರುವುದಿಲ್ಲ ಎಂದರು.
ಜ್ಞಾನ ಇದ್ದೆಡೆ ಅಜ್ಞಾನಕ್ಕೆ ಅವಕಾಶ ಇರುವುದಿಲ್ಲ. 1621 ಭಾಷೆ, 6450 ಜಾತಿಗಳು, 28 ರಾಷ್ಟ್ರೀಯ ಹಬ್ಬಗಳು, 500 ವರ್ಷ ಇತಿಹಾಸ ಇರುವ ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಮನುಷ್ಯ ಕ್ರೂರಿಯಾಗುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಶಿಕ್ಷಣ ಪ್ರತಿಯೊಬ್ಬರನ್ನು ಉತ್ತಮ ಪ್ರಜೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಸಂಸ್ಥೆಯ ಆಡಳಿತ ವ್ಯವಸ್ಥಾಪಕಿ ನಳಿನ ಡೀಸಾ ಮಾತನಾಡಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಿರುವುದು ಸಂತೊಷದ ಸಂಗತಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸುವ ಸಲುವಾಗಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಇಲ್ಲಿ ಕಲಿತು ನಂತರ ಹಣದಾಸೆಗೆ ವಿದೇಶಕ್ಕೆ ಹೋಗದೆ ಇಲ್ಲಿಯೇ ಸೇವೆ ಸಲ್ಲಿಸಬೇಕು ಎಂದು ಸಲಹೆ ಮಾಡಿದರು.
ಸಂಸ್ಥೆ ಪ್ರಾಚಾರ್ಯ ಡಾ.ಭಾಗ್ಯಲಕ್ಷ್ಮಮ್ಮ ಅಧ್ಯಕ್ಷತೆ ವಹಿಸಿದ್ದರು. ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿ ಡಾ. ಶಿವದತ್ತ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸತೀಶ್ ಉಪಸ್ಥಿತರಿದ್ದರು.