ತೆಂಗು ಬೆಳೆಗಾರರ ಸಮಸ್ಯೆ ಪರಿಹರಿಸಿ: ದೇವೇಗೌಡ
ಕ.ಪ್ರ.ವಾರ್ತೆ , ಕಡೂರು , ಫೆ.28
ನೀರಿಲ್ಲದೆ ತೆಂಗಿನ ತೋಟಗಳು ಒಣಗಿ ಬರಗಾಲದಿಂದ ರಾಜ್ಯದ ತೆಂಗು ಬೆಳೆಗಾರರು ಸಂಕಷ್ಟದಲ್ಲಿರುವ ಬಗ್ಗೆ ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವವರು ಗಮನಹರಿಸಬೇಕಿದೆ ಎಂದು ಹಾಸನ ಲೋಕಸಭಾ ಸದಸ್ಯ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಹಾಸನ ಲೋಕಸಭೆ ವ್ಯಾಪ್ತಿಯ ಕಡೂರು ವಿಧಾನಸಭಾ ಕ್ಷೇತ್ರದ ಜಿ.ಯರದಕೆರೆಯಲ್ಲಿ 11 ಕೋಟಿ ವೆಚ್ಚದಲ್ಲಿ ಪಿಎಂಜಿಎಸ್‌ವೈ ಯೋಜನೆಯ 2ನೇ ಹಂತದ ಚಿನಕಾರನಹಳ್ಳಿಯಿಂದ ಯಗಟಿಯ 18 ಕಿ.ಮೀ. ರಸ್ತೆ ಕಾಮಗಾರಿ, ಯಗಟೀಪುರದ ಬಸವನ ತೀರ್ಥದಲ್ಲಿ 85 ಲಕ್ಷ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಗಮನಹರಿಸಿ: ಇಡೀ ರಾಜ್ಯದ ಉದ್ದಗಲಕ್ಕೂ ತಾವು ತೆಂಗು, ಅಡಕೆ ತೋಟಗಳನ್ನು ನೋಡಿದ್ದು, ತೆಂಗಿನ ತೋಟಗಳು ಮಳೆಯಿಲ್ಲದೆ ಬರಗಾಲದಿಂದ ಕಾಯಿಲ್ಲದೆ ಒಣಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಡಿಯಲು ನೀರಿಲ್ಲದೆ ಬದುಕಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ಬರಗಾಲ ಆವರಿಸಿ ರೈತರ ತೋಟಗಳು ಹಾಳಾಗಿರುವ ಬಗ್ಗೆ ರೈತರು ಹೋರಾಟದ ಹಾದಿ ತುಳಿಯುವುದಕ್ಕೆ ಮುಂಚೆ ಆಡಳಿತ ನಡೆಸುತ್ತಿರುವರು ಗಮನಹರಿಸಬೇಕು ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಲೋಕಸಭಾ ನಿಧಿಯಿಂದ ಇಂದು 11 ಕೋಟಿ ವೆಚ್ಚದ ಅಭಿವೃದ್ಧಿಕಾಮಗಾರಿಗೆ ಚಾಲನೆ ನೀಡಿದ್ದಾರೆ. ಕ್ಷೇತ್ರದ 10 ಕಡೆ ಶುದ್ಧಗಂಗಾ ಘಟಕ ನಿರ್ಮಾಣಕ್ಕೂ ತಮ್ಮ ನಿಧಿಯಿಂದ ತಲಾ 5 ಲಕ್ಷ ಅನುದಾನ ನೀಡಿದ್ದಾರೆ. ಕಡೂರು ಕ್ಷೇತ್ರದಲ್ಲಿ ತಮ್ಮ ಪ್ರಥಮ ಚುನಾವಣಾ ಪೂರ್ವದಲ್ಲಿ ಯಗಟಿಯಿಂದ ಕ್ಷೇತ್ರದ ಹಳ್ಳಿಗಳಿಗೆ ಕೈಗೊಂಡ 374 ಕಿ.ಮೀ. ಪಾದಯಾತ್ರೆಯಲ್ಲಿ ನೀಡಿದ ಭರವಸೆಯಂತೆ ಯಗಟಿಯಿಂದ ಚಿನಕಾರನಹಳ್ಳಿವರೆಗೆ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ ಎಂದರು.
30 ವರ್ಷದ ಕಡೂರು ಕ್ಷೇತ್ರದ ರಾಜಕೀಯದ ಇತಿಹಾಸದಲ್ಲೇ ಮೊದಲ ಬಾರಿಗೆ ಲೋಕೋಪಯೋಗಿ ಇಲಾಖೆಯಿಂದ 11 ಕೋಟಿ ಅನುದಾನ ತಂದು ಮರವಂಜಿಯಿಂದ ಬೆಲಗೂರುವರೆಗೆ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಗಿರಿಬೊಮ್ಮನಹಳ್ಲಿ ಚನ್ನಾಪುರ ರಸ್ತೆಗೆ 1.75 ಕೋಟಿ ಹಾಗೂ ಬಿವೈಎಸ್‌ಎಸ್ ರಸ್ತೆಗೆ 2.50 ಕೋಟಿ ಹಾಗೂ ಬೀರೂರು- ಲಿಂಗದಹಳ್ಳಿ ರಸ್ತೆಗೆ ಅನುದಾನ ತಂದಿದ್ದು, ಅದಕ್ಕಾಗಿ ತಾವು ರಾಜ್ಯ ಸರ್ಕಾವರವನ್ನು ಅಭಿನಂದಿಸುವುದಾಗಿ ದತ್ತ ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ ಮಾತನಾಡಿದರು. ಜಿಲ್ಲಾ ಜೆಡಿಎಸ್ ಮುಖಂಡ ಎಚ್.ಎಚ್. ದೇವರಾಜ್, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಜೆಡಿಎಸ್ ಮುಖಂಡರಾದ ಭಂಡಾರಿ ಶ್ರೀನಿವಾಸ್, ಮಚ್ಚೇರಿ ಕರಿಯಪ್ಪ, ಸೀಗೇಹಡ್ಲು ಹರೀಶ್, ಪಿ.ಒ. ಚಂದ್ರಶೇಖರ್, ಸಂಕ್ಲಾಪುರ ಕುಮಾರ್, ಬಿಸಲೆರೆ ಕೆಂಪರಾಜು, ಬಿ.ಟಿ. ಗಂಗಾಧರನಾಯ್ಕ, ಈಶ್ವರಪ್ಪ, ಕೆ.ಎಚ್.ಲಕ್ಕಪ್ಪ, ಜಿ.ಯರದಕೆರೆ, ಪುರ ಮರವಂಜಿ, ಹೋಚೀಹಳ್ಳಿ, ವಕ್ಕಲಗೆರೆ, ಕುಂಕಾನಾಡು ಗ್ರಾ.ಪ.ಗಳ ಅಧ್ಯಕ್ಷರಾದ ಟಿ.ವಿ.ವೆಂಕಟೇಶ್ ಇತರರಿದ್ದರು.
'ಚುನಾವಣೆಯಲ್ಲಿ ತೃತೀಯ ರಂಗದ ಪಾತ್ರ ನಿರ್ಣಾಯಕ'
ಕಡೂರು: ಪ್ರಾದೇಶಿಕ ಪಕ್ಷಗಳೇ ಸೂಕ್ತ ಎಂಬ ಮಾದರಿ ಆಡಳಿತ ನೀಡಿರುವ ಅನುಭವಿಗಳಿರುವ ತೃತೀಯ ರಂಗದಲ್ಲಿ ದೇಶದ ಸಕ್ರಿಯ ರಾಜಕಾರಣದಲ್ಲಿ ತೃತೀಯ ರಂಗವು ಮುಂದಿನ ದಿನಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ಮೂಲಕ ದೇಶದ ಜನತೆಗೆ ಹೊಸ ಸಂದೇಶ ನೀಡುವುದನ್ನು ಕಾದು ನೋಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಭವಿಷ್ಯ ನುಡಿದರು.
ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ ದತ್ತರವರ ಸ್ವಗ್ರಾಮ ಯಗಟಿಯ ನಿವಾಸದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶವು ಸಂಕಷ್ಟ ಸ್ಥಿತಿಯಲ್ಲಿರುವುದನ್ನು ದೇಶವನ್ನಾಳಿದ ಹಾಗು ಆಳುತ್ತಿರುವ ರಾಜಕಾರಣಿಗಳು ಏಕೆ ಚಿಂತಿಸುತ್ತಿಲ್ಲ ಅಧಿಕಾರವೇ ಮುಖ್ಯವೇ ಎಂದು ಪ್ರಶ್ನಿಸಿದರು.
ದೇಶದಲ್ಲಿ ಮೋದಿ ಹವಾ ಹೆಚ್ಚಾಗಿದೆಯೇ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ದೇವಗೌಡರು, ಮೋದಿ ಹವಾವವನ್ನು ಜನರು ತೆಗೆದುಕೊಳ್ಳುತ್ತಿಲ್ಲ. ಮಾಧ್ಯಮಗಳು ಮಾತ್ರ ಅದನ್ನು ವೈಭವೀಕರಿಸುತ್ತಿವೆ ಎಂದರು.
ಮಾಜಿ ಮುಖ್ಯ ಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಎಲ್ಲರೂ ಸೇರಿ ಇರುವ ಅನುಭವಿಗಳ ಕೂಟವೇ ತೃತೀಯ ರಂಗವಾಗಿದ್ದು ದೇಶದ ಎಲ್ಲೆಡೆ ಪ್ರಾದೇಶಿಕ ಪಕ್ಷಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂಬುದನ್ನು ಹಲವಾರು ವರ್ಷದಿಂದ ನೋಡುತ್ತಾ ಬಂದಿದ್ದೇವೆ. ಪ್ರಾದೇಶಿಕ ಪಕ್ಷಗಳ ಪಾತ್ರವು ಪ್ರಮುಖ ಎಂಬುದು ದೇಶದ ರಾಜಕಾರಣದಲ್ಲಿ ಸಾಭೀತಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಂ.ಮಹೇಶ್ವರಪ್ಪ, ಭಂಢಾರಿ ಶ್ರೀನಿವಾಸ್, ಲಕ್ಕಪ್ಪ, ಸೀಗೇಹಡ್ಲು ಹರೀಶ್,ತಮ್ಮಯ್ಯ, ವೈ.ಎಸ್.ರವಿಪ್ರಕಾಶ್, ಬಿಸಲೆರೆ ಕೆಂಪರಾಜು,ಸಂಕ್ಲಾಪುರ ಕುಮಾರ್ ಮತ್ತಿತರರು ಇದ್ದರು.