ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ದೇವಸ್ಥಾನ ಕಾಮಗಾರಿಗೆ ಚಾಲನೆ

Vishwanath S
Updated On : 1 Mar 2014, 11:29 am

ಮೂಡಿಗೆರೆ: ತಾಲೂಕಿನ ಚಿನ್ನಿಗಾ-ಜನ್ನಾಪುರ ಗ್ರಾಮದಲ್ಲಿ 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಲಿರುವ ನೂತನ ಗಣಪತಿ ದೇವಸ್ಥಾನದ ಕಟ್ಟಡ ಕಾಮಗಾರಿಗೆ ಶಾಸಕ ಬಿ.ಬಿ. ನಿಂಗಯ್ಯ ಮತ್ತು ಜಿ.ಪಂ. ಸದಸ್ಯ ವಿ.ಕೆ. ಶಿವೇಗೌಡ ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಶಾಸಕರು, ದೇವಸ್ಥಾನಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಿದೆ. ಭಕ್ತಿ, ಭಾವದಿಂದ ಯಾವುದೇ ದೇವರನ್ನು ಪೂಜಿಸಿ, ಪ್ರಾರ್ಥಿಸಿದರೂ ನಮ್ಮ ಮನೆ ಮತ್ತು ಮನದಲ್ಲಿ ಉಲ್ಲಾಸ ಮೂಡುತ್ತದೆ. ಪ್ರತಿನಿತ್ಯ ಜನರು ಯಾವ ಕಾರ್ಯ ಕೈಗೊಳ್ಳುವುದಿದ್ದರೂ ದೇವರನ್ನು ನೆನಪಿಸಿಕೊಳ್ಳದೇ ಮುಂದುವರಿಯುವುದಿಲ್ಲ. ದೇವರ ಮೇಲಿನ ನಂಬಿಕೆ, ಆಚಾರ, ವಿಚಾರ, ಸಂಪ್ರದಾಯ ಪಾಲಿಸುವುದರಿಂದ ಅಡ್ಡಿ, ಆತಂಕಗಳ ನಿವಾರಣೆಯಾಗುತ್ತದೆ ಎಂದರು.
ಈ ಸಮಯದಲ್ಲಿ ತಾಪಂ ಮಾಜಿ ಅಧ್ಯಕ್ಷ ರಂಜನ್ ಅಜಿತ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಹಾಜರಾಬಿ, ಉಪಾಧ್ಯಕ್ಷ ಸಿ.ವಿ. ಸುದೀಪ್, ಸದಸ್ಯರಾದ ಸುನೀಲ್‌ಕುಮಾರ್, ಪ್ರವೀಣ್‌ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ರಾಮಚಂದ್ರೇಗೌಡ, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಲೋಹಿತ್, ಎಚ್.ಆರ್. ಪುಟ್ಟಸ್ವಾಮಿಗೌಡ, ಜಿಲ್ಲಾ ಬಿಜೆಪಿಯ ಜೆ.ಎಸ್. ರಘು, ಬಾಳೂರು ಹೋಬಳಿ ಜೆಡಿಎಸ್ ಅಧ್ಯಕ್ಷ ಲಕ್ಷ್ಮಣಗೌಡ, ಪ್ರಧಾನ ಕಾರ್ಯದರ್ಶಿ ತರುವೆ ಆದರ್ಶ, ಪ್ರಹ್ಲಾದ, ಮುಖಂಡರಾದ ಕರುಣಾಕರ, ಸೂರಿ, ವಚನ, ಮಗ್ಗಮಕ್ಕಿ ರವಿ ಮತ್ತಿತರರಿದ್ದರು.
ಗ್ರಾಪಂ ಅಧ್ಯಕ್ಷರಾಗಿ ಆಯ್ಕೆ
ಆಲ್ದೂರು: ಇಲ್ಲಿನ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಬಿ.ಆರ್. ನಾಗರತ್ನ ನಾಗೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಅಧಿಕಾರಿ, ಪ್ರಭಾರಿ ತಹಸೀಲ್ದಾರ್ ಮಹೇಶ್ವರಪ್ಪ ಅವರು ನೂತನ ಅಧ್ಯಕ್ಷರ ಆಯ್ಕೆ ಪ್ರಕಟಿಸಿದರು.
ಆಲ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಶೀಲ ಚಿದಂಬರಂ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಖಾಲಿಯಾದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಬಿ.ಆರ್. ನಾಗರತ್ನ ನಾಗೇಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಜಯಶೀಲ ಚಿದಂಬರಂ, ದೊಡ್ಡಮಾಗರವಳ್ಳಿ ಮಾಜಿ ಉಪಾಧ್ಯಕ್ಷೆ ಚಂಪಾ ಜಗದೀಶ್ ಹಾಗೂ ವಿಶ್ವ ಹಿಂದೂ ಪರಿಷತ್‌ನ ನಾರಾಯಣ್ ಆಚಾರ್, ಮಾಜಿ ಉಪಾಧ್ಯಕ್ಷ ಬಿ.ಡಿ. ಅಶೋಕ್, ಆಲ್ದೂರು ಹೋಬಳಿಯ ಬಿಜೆಪಿಯ ಹೋಬಳಿ ಅಧ್ಯಕ್ಷ ದುರ್ಗ ರವಿ, ಮಾಜಿ ಅಧ್ಯಕ್ಷ ಹಳ್ಳಿ ಪ್ರಸನ್ನ ಹಾಗೂ ಮಾಜಿ ಅಧ್ಯಕ್ಷ ಎಚ್.ಎಸ್. ಕವೀಶ್ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷೆ ಹೂವಮ್ಮ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರಮೇಶ್ ಉಪಸ್ಥಿತರಿದ್ದರು.
ಇಂದು ಉಚಿತ
ಚಿಕಿತ್ಸಾ ಶಿಬಿರ
ಕೊಪ್ಪ: ಶ್ರೀಕ್ಷೇತ್ರ ಶಕಟಪುರಂ, ಪ್ರಶಮನೀ ಆಸ್ಪತ್ರೆ, ಕೊಪ್ಪ ರೋಟರಿ ಕ್ಲಬ್ ಆಶ್ರಯದಲ್ಲಿ ಜನರಲ್ ಸರ್ಜರಿ, ಯುರಾಲಜಿ ತಜ್ಞರಿಂದ ಉಚಿತ ಚಿಕಿತ್ಸಾ ಶಿಬಿರವನ್ನು ಮಾ.2ರಂದು ಪಟ್ಟಣದ ಪ್ರಶಮನೀ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಶಮನೀ ಆಸ್ಪತ್ರೆಯ ವೈದ್ಯ ಡಾ. ಉದಯಶಂಕರ ತಿಳಿಸಿದ್ದಾರೆ. ಮಾಹಿತಿ, ಹೆಸರನ್ನು ನೋಂದಾಯಿಸಿಕೊಳ್ಳಲು 08265-221996 ಗೆ ಸಂಪರ್ಕಿಸಿ.
ವಿಜ್ಞಾನ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು, ಫೆ.28
ವಿಜ್ಞಾನ ವಿಷಯವು ಪ್ರತಿನಿತ್ಯ ಹೊಸ- ಹೊಸ ಪ್ರಯೋಗಗಳ ಮುಖಾಂತರ ಅತ್ಯಂತ ಕ್ರಿಯಾಶೀಲರಾಗಿ ನಮ್ಮನ್ನು ಗುರಿ ಮುಟ್ಟುವಂತೆ ಮಾಡುತ್ತದೆ ಎಂದು ಜೆವಿಎಸ್ ಶಾಲೆಯ ಪ್ರಾಂಶುಪಾಲ ಅಪ್ಪಯ್ಯ ಹೇಳಿದ್ದಾರೆ.
ನಗರದ ಜೆವಿಎಸ್ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ವೈಜ್ಞಾನಿಕ ಮಾದರಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ವಿಷಯದಲ್ಲೂ ಹೆಚ್ಚಿನ ಆಸಕ್ತಿ ತೋರಿ ಪ್ರತಿನಿತ್ಯ ಹೊಸ- ಹೊಸ ಪ್ರಯೋಗ ಮಾಡಬೇಕು ಎಂದರು.
ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ ಮಾತನಾಡಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮಾದರಿಗಳ ಕಾರ್ಯಕ್ರಮದಲ್ಲಿ ಅತ್ಯುತ್ತಮ ಮಾದರಿ ನಿರ್ಮಿಸಿ ತಮ್ಮಲ್ಲಿರುವ ಪ್ರತಿಭೆ ತೋರಿಸಿದ್ದಾರೆ ಎಂದರು.
ವಿಜ್ಞಾನ ಮಾದರಿಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಶಂಕರೇಗೌಡ ಉಪಸ್ಥಿತರಿದ್ದರು. ಲಾಸ್ಯ ನಿರೂಪಿಸಿ, ಸ್ವಾತಿ ವಂದಿಸಿದರು.
ಭದ್ರಾ ನದಿ ಪಾತ್ರದ ಜನರಿಗೆ ಎಚ್ಚರಿಕೆ
ಚಿಕ್ಕಮಗಳೂರು: ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲೂಕು, ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ರಾಜನಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಲು ಮತ್ತು ಕುಡಿಯುವ ನೀರು ಪೂರೈಸಲು ಫೆ. 28ರ ಸಂಜೆ 6 ಗಂಟೆಯಿಂದ ನೀರನ್ನು ಅವಶ್ಯಕತೆಗನುಗುಣವಾಗಿ ನೀರಿನ ಪ್ರಮಾಣವನ್ನು ನಿಯಂತ್ರಿಸಿ ಮಾ. 9 ರವರೆಗೆ ಬಿಡಲಾಗುತ್ತಿದೆ.
ಭದ್ರಾ ದಂಡೆಯ ಕೆಳಮಟ್ಟದ ಸಾರ್ವಜನಿಕರು ತಿರುಗಾಡುವುದು, ದನಕರು ಮೇಯಿಸುವುದು ಮತ್ತು ತೋಟಗಾರಿಕೆ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ. ರೈತರು ನದಿಯ ದಂಡೆಯಲ್ಲಿ ಅಳವಡಿಸಿರುವ ಪಂಪ್‌ಸೆಟ್‌ಗಳಿಂದ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
2ನೇ ರಾಷ್ಟ್ರೀಯ ಲೋಕ ಅದಾಲತ್
ಚಿಕ್ಕಮಗಳೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಕೆನರಾ ಬ್ಯಾಂಕ್ ಹಾಗೂ ವಾರ್ತಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ 2ನೇ ರಾಷ್ಟ್ರೀಯ ಲೋಕ ಅದಾಲತ್ ಸಂಬಂಧ ಬ್ಯಾಂಕ್ ಪ್ರಕರಣಗಳ ಅದಾಲತ್‌ನ ಉದ್ಘಾಟನಾ ಕಾರ್ಯಕ್ರಮ ಮಾ. 1 ರಂದು ಬೆಳಗ್ಗೆ 10 ಗಂಟೆಗೆ ನಗರದ ಕೆನರಾ ಬ್ಯಾಂಕ್ ಮುಖ್ಯ ಶಾಖೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಚ್.ಎಸ್. ಕಮಲ ಉದ್ಘಾಟಿಸಲಿದ್ದಾರೆ.
ಕೆನರಾ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಎಂ.ಎಂ. ಚಿನಿವಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮದ್, ಶಿವಮೊಗ್ಗದ ಕೆನರಾ ಬ್ಯಾಂಕ್ ಸಹಾಯಕ ಮಹಾ ಪ್ರಬಂಧಕ ಸತೀಶ್ ಶೆಟ್ಟಿ ಭಾಗವಹಿಸಲಿದ್ದಾರೆ.
ಕಾಲ್ನಡಿಗೆ ಜಾಥಾ
ಬಾಳೆಹೊನ್ನೂರು: ಇಲ್ಲಿನ ಬಿ.ಕಣಬೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿ ಬಾಳೆಹೊನ್ನೂರಿನಿಂದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿವರೆಗೆ ಮಾ. 1 ರಂದು ಕಾಲ್ನಡಿಗೆ ಜಾಥಾ ಹಾಗೂ ವಾಹನ ಜಾಥಾ ನಡೆಸಲಾಗುವುದು ಎಂದು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಶ್ರಫ್ ಹೇಳಿದ್ದಾರೆ. ಈ ಕುರಿತು ಕಳೆದ ಡಿ. 23 ರಂದು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜಿಪಂ ಕಚೇರಿವರೆಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಸದಸ್ಯರ ನೇಮಕ
ನರಸಿಂಹರಾಜಪುರ: ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಚಿಕ್ಕಮಗಳೂರು ಜಿಲ್ಲೆಯಿಂದ ಇದಿನಬ್ಬ ಬ್ಯಾರಿ ಹಾಗೂ ಮೂಡಿಗೆರೆ ತಾಲೂಕಿನ ಅಬ್ಬಾಸ್ ಕರುಗುಂದ ಅವರನ್ನು ಸದಸ್ಯರನ್ನಾಗಿ ಸರ್ಕಾರ ನೇಮಕ ಮಾಡಲಾಗಿದೆ ಎಂದು ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಎನ್.ಎ.ಶೇಖಬ್ಬ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.                                                                    ನಾಳೆಯಿಂದ ಉಚಿತಪ್ರಾಣಾಯಾಮ ಶಿಬಿರ
ಕೊಪ್ಪ: ಪಟ್ಟಣದ ನಚಿಕೇತ ಶಾಲೆಯಲ್ಲಿ ಮಾ.2ರಿಂದ ಮಾ.9ರ ವರೆಗೆ ಸಂಜೆ 6.30ರಿಂದ 7.30ರ ವರೆಗೆ ಯೋಗ ಶಿಕ್ಷಕ ಎಸ್.ವೈ. ದಿವಾಕರ ಭಟ್ ಅವರಿಂದ ಉಚಿತ ಪ್ರಾಣಾಯಾಮ ಶಿಬಿರವನ್ನು ಏರ್ಪಡಿಸಲಾಗಿದೆ. ದೂರವಾಣಿ ಮನರಂಜನಾ ಕೂಟ, ಕೊಪ್ಪ ಬಿಎಸ್‌ಎನ್‌ಎಲ್, ವಿಪ್ರನೌಕರರ ಕ್ಷೇಮಾಭಿವೃದ್ಧಿ ಸಂಘ, ತಾಲೂಕು ಬ್ಯಾಂಕರ್ಸ್ ರಿಕ್ರಿಯೇಷನ್ ಕ್ಲಬ್, ಜಯಲಕ್ಷ್ಮಿ ಕಮ್ಯುನಿಕೇಷನ್ಸ್, ಮಲೆನಾಡು ಸ್ವಸಹಾಯ ಸಂಘ, ಇವರ ಸಂಯುಕ್ತಾಶ್ರಯದಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ ರಾಮಚಂದ್ರ- 9449859950, ರಾಜಶೇಖರ್ 9449620204 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಇಂದು ಸಾಂಸ್ಕೃತಿಕ ಕಾರ್ಯಕ್ರಮ
ಚಿಕ್ಕಮಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾ ಶಾಖೆಯ ಸಂಯುಕ್ತಾಶ್ರಯದಲ್ಲಿ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾ. 1 ರಂದು ಸಂಜೆ 6.30ಕ್ಕೆ ನಗರದ ಕೆಂಪನಹಳ್ಳಿಯ ಆಶಾಕಿರಣ ಅಂಧ ಮಕ್ಕಳ ವಸತಿಯುತ ಪಾಠಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಒಕ್ಕೂಟದ ಅಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಸದಸ್ಯ ಕೆ.ಎಸ್. ಪುಷ್ಪರಾಜು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಂ.ಎಸ್. ನಂಜುಂಡಸ್ವಾಮಿ, ಕರ್ನಾಟಕ ಗಮಕ ಕಲಾ ಪರಿಷತ್‌ನ ಜಿಲ್ಲಾ ಅಧ್ಯಕ್ಷ ರಾಮ ಸುಬ್ರಾಯಶೇಟ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement