ಫ್ಲೆಕ್ಸ್ಗಳ ಧ್ವಂಸ: ಬಂಧನ
ಮೂಡಿಗೆರೆ: ಕಾಂಗ್ರೆಸ್ನ ರಾಷ್ಟ್ರೀಯ ಮತ್ತು ರಾಜ್ಯ ನಾಯಕರ ಭಾವಚಿತ್ರವಿದ್ದ 4 ಫ್ಲೆಕ್ಸ್ಗಳನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಮಾಕೋನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ಮನು ಮಾತನಾಡಿ, ಗುರುವಾರ ಸಂಜೆ ಮಾಕೋನಹಳ್ಳಿ ಗ್ರಾಮದ ವಿವಿಧೆಡೆ ಪ್ಲೆಕ್ಸ್ಗಳನ್ನು ಕಟ್ಟಲಾಗಿತ್ತು. ಶುಕ್ರವಾರ ಬೆಳಗ್ಗೆ ನೋಡುವಾಗ ಮಾಕೋನಹಳ್ಳಿ ಗ್ರಾಮದಲ್ಲಿ ನಾಲ್ಕು ಫ್ಲೆಕ್ಸ್ಗಳನ್ನು ಕೆಲವು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಫ್ಲೆಕ್ಸ್ನಲ್ಲಿ ಗಣ್ಯಾತೀಗಣ್ಯರ ಭಾವಚಿತ್ರಗಳಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ನ ಏಳಿಗೆ ಸಹಿಸದವರು ಕಿಡಿಗೇಡಿ ಕೃತ್ಯ ನಡೆಸಿದ್ದಾರೆಂದರು.
ಕೇವಲ ಫ್ಲೆಕ್ಸ್ ಧ್ವಂಸಗೊಳಿಸುವುದರಿಂದ ಕಾಂಗ್ರೆಸ್ನ ವರ್ಚಸ್ಸು ನಾಶಪಡಿಸಲು ಸಾಧ್ಯವಿಲ್ಲ. ಕಿಡಿಗೇಡಿ ಕೃತ್ಯದಿಂದ ಗಣ್ಯಾತಿಗಣ್ಯರಿಗೆ ಅಗೌರವ ಸೂಚಿಸಿದಂತಾಗಿದ್ದು, ಕಿಡಿಗೇಡಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ತಕ್ಷಣ ಬಂಧಿಸಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸ್ಥಳಕ್ಕೆ ಅಪರಾಧ ವಿಭಾಗದ ಠಾಣಾಧಿಕಾರಿ ಸಂಕಪ್ಪಯ್ಯ ಸಹಿತ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಬಿಗಿ ಬಂದೋಬಸ್ತ್ ನಡೆಸಿದರು. ಶ್ವಾನ ದಳವನ್ನು ಕರೆಸಿ ತಪಾಸಣೆ ನಡೆಸಲಾಯಿತು. ಸುತ್ತಮುತ್ತಲ ಪರಿಸರದಲ್ಲಿ ನಾಲ್ಕಾರು ಬಾರಿ ಶ್ವಾನದಳ ಸಂಚರಿಸಿತು. ಘಟನೆ ಕುರಿತು ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ವೇಳೆ ಕಾಂಗ್ರೆಸ್ ಹೋಬಳಿ ಅಧ್ಯಕ್ಷ ಎಂ.ಎನ್. ಅಶ್ವತ್ಥ್, ತಾಪಂ ಸದಸ್ಯೆ ಸುಧಾ, ಮುಖಂಡರಾದ ಎಂ.ಬಿ. ನಾಗರಾಜ್, ಶೇಷೇಗೌಡ, ಶಶಿಧರ್, ಮಂಜುನಾಥ್, ಘಟಕದ ಅಧ್ಯಕ್ಷ ಪರಮೇಶ್, ಕುಂಞ ಅಹಮ್ಮದ್ ಮತ್ತಿತರರಿದ್ದರು.