ಲೋಕ ಅದಾಲತ್‌ನಿಂದ ಕೋರ್ಟ್ ಹೊರೆ ಇಳಿಮುಖ
ನರಸಿಂಹರಾಜಪುರ: ಲೋಕ ಅದಾಲತ್ ಮೂಲಕ ಕೇಸುಗಳನ್ನು ಇತ್ಯರ್ಥಪಡಿಸಿದರೆ ನ್ಯಾಯಾಲಯದ ಮೇಲೆ ಒತ್ತಡ ಕಡಿಮೆಯಾಗುತ್ತದೆ ಎಂದು ಪ್ರಧಾನ ಜಿಲ್ಲಾ ಸತ್ರ ನ್ಯಾಯಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧೀಕಾರದ ಅಧ್ಯಕ್ಷೆ ಎಚ್.ಎಸ್.ಕಮಲ ತಿಳಿಸಿದರು.
ಶುಕ್ರವಾರ ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧೀಕಾರದ ಆಶ್ರಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವ ಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಅದಾಲತ್‌ಗೆ ಒತ್ತು ನೀಡಿ: ನ್ಯಾಯಾಲಯದಲ್ಲಿ ಕೇಸುಗಳ ಸಂಖ್ಯೆ ಹೆಚ್ಚಾಗಿದ್ದು ಕೇಸುಗಳ ವಿಲೇವಾರಿ ಕಡಿಮೆಯಾಗಿದೆ. ಆದ್ದರಿಂದ ಲೋಕ ಅದಾಲತ್ ಮೂಲಕ ಕೇಸುಗಳನ್ನು ತ್ವರಿತಗತಿಯಾಗಿ ಇತ್ಯರ್ಥಪಡಿಸಲು 2 ನೇ ಲೋಕ ಅದಾಲತ್ ಜಾರಿಗೆ ಬಂದಿದ್ದು ಲೋಕ ಅದಾಲತ್‌ಗೆ ಹೆಚ್ಚು ಒತ್ತು ನೀಡಿದರೆ ನ್ಯಾಯಾಲಯದ ಹೊರೆ ಕಡಿಮೆಯಾಗುತ್ತದೆ ಎಂದರು.
ನ್ಯಾಯಧೀಶ ಹಾಗೂ ತಾಲೂಕು ಕಾನೂನು ಸೇವಾ ಪ್ರಾಧೀಕಾರದ ಸದಸ್ಯ ಕಾರ್ಯದರ್ಶಿ ನವೀನ್ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ನ್ಯಾಯಾಲಯದಲ್ಲಿ ಶುಕ್ರವಾರ ಹಾಗೂ ಶನಿವಾರ ಲೋಕ ಅದಾಲತ್ ನಡೆಸುತ್ತಿದ್ದೇವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಅರುಣ ಕುಮಾರ್ ವಹಿಸಿದ್ದರು.
ಸಭೆಯಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಎಚ್.ಎಸ್. ಲೋಹಿತಾಶ್ವ ಉಪಸ್ಥಿತರಿದ್ದರು.