ವಿಜ್ಞಾನ ಕಲಿಕೆ ರೋಚಕ: ಶ್ರೀಮುರಳಿ
ಕ.ಪ್ರ.ವಾರ್ತೆ ಟಿ ಶೃಂಗೇರಿ ಟಿ ಫೆ.28
ವಿಜ್ಞಾನ ಎಂದರೆ ಸುಜ್ಞಾನ. ಅದು ಅತ್ಯಂತ ವಿಶಿಷ್ಟ ಮತ್ತು ಒಂದು ವಿಸ್ಮಯಕಾರಿ ವಿಷಯದಿಂದ ಕೂಡಿದೆ. ವಿಜ್ಞಾನದಲ್ಲಿ ಅವಲೋಕನ, ವಿಶ್ಲೇಷಣೆ, ಫಲಿತಾಂಶಗಳು ಅತ್ಯಂತ ಪ್ರಮುಖವಾಗಿದೆ. ಪ್ರಶ್ನೆಗಳು ಉದ್ಭವಿಸುತ್ತದೆ. ವಿಜ್ಞಾನ ರೋಚಕತೆಯಿಂದ ಕೂಡಿದೆ ಎಂದು ಬೆಂಗಳೂರಿನ ಶ್ರೀಮುರುಳಿ ಅಭಿಪ್ರಾಯಪಟ್ಟರು.
ಪಟ್ಟಣದ ಮಾನಗಾರು ಜ್ಞಾನಭಾರತೀ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚಾರಣೆ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಜೀವನ ಕ್ರಮವನ್ನೇ ಬದಲಾಯಿಸಿದೆ. ಇಂದಿನ ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ವಿಜ್ಞಾನದ ಬಗ್ಗೆ ಅರಿವು ಪಡೆದರೆ ಸ್ಮರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು. ಇಂದಿನ ಮುಂದುವರಿದ ವೈಜ್ಞಾನಿಕ, ತಂತ್ರಜ್ಞಾನ ಯುಗದಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯ ಅಗತ್ಯತೆ, ಅನಿವಾರ್ಯತೆಯಿದೆ. ವಿದ್ಯಾರ್ಥಿಗಳು ಇದನ್ನು ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಮಹತ್ತರ ಕೊಡುಗೆ ನೀಡಬೇಕು ಎಂದರು.
ಜ್ಞಾನಭಾರತೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಲಕ್ಷ್ಮಿನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಎಂ. ಸತೀಶ್, ಶಿಕ್ಷಣ ಸಂಯೋಜಕಿ ಡಾ.ಲಕ್ಷ್ಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ದಿನಾಚಾರಣೆ ಅಂಗವಾಗಿ ಅಂತರ ಶಾಲಾಮಟ್ಟದ ವಿಜ್ಞಾನ ಸ್ಪರ್ಧೆ ಆಯೋಜಿಸಲಾಗಿತ್ತು. ರಸಪ್ರಶ್ನೆ, ವಿಜ್ಞಾನಿಗಳ ಬಗ್ಗೆ ಭಾಷಣ, ಪ್ರಬಂಧ ಸ್ಪರ್ಧೆಗಳು ನಡೆಯಿತು. ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜೆಸಿಸ್ ಶಾಲೆಯ ಅಮೃತ್, ಜೀವನ್ ಪ್ರಥಮ, ಶಿಡ್ಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಅಕ್ಷತಾ, ಪೂರ್ವಿಕಾ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಜೆಸಿಸ್ ಶಾಲೆಯ ಸನ್ಮತಿ ಪ್ರಥಮ, ಕಲ್ಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೃತಿಕಾ ಕೆ.ಕೆ. ದ್ವಿತೀಯ, ಭಾಷಣ ಸ್ಪರ್ಧೆಯಲ್ಲಿ ಕಲ್ಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಆಯಿಶ ಪ್ರಥಮ, ಜೆಸಿಸ್ ಶಾಲೆಯ ಸನ್ಮತಿ ದ್ವಿತಿಯ ಸ್ಥಾನ ಪಡೆದರು.