ಶೌಚಾಲಯ: ಗುರಿ 30 ಸಾವಿರ, ನಿರ್ಮಾಣವಾಗಿದ್ದು 12 ಸಾವಿರ!
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಫೆ.28
ಶೌಚಾಲಯ ಮುಕ್ತ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ದೇಶದಲ್ಲಿ ನಿರ್ಮಲ ಭಾರತ ಯೋಜನೆ ಜಾರಿಗೆ ತರಲಾಗಿದೆ. ಆದರೆ, ಜನರ ಅಸಹಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ.
ಚಿಕ್ಕಮಗಳೂರು ಜಿಲ್ಲೆಯಲ್ಲಿ 2013- 14ನೇ ಸಾಲಿನಲ್ಲಿ 70 ಸಾವಿರ ಶೌಚಾಲಯ ನಿರ್ಮಾಣ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಈ ಗುರಿಯನ್ನು 30 ಸಾವಿರಕ್ಕೆ ಇಳಿಸಲಾಗಿದ್ದು, ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಕ್ತಾಯಗೊಳ್ಳಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಜಿಲ್ಲೆಯಲ್ಲಿ ಈ ವರ್ಷದಲ್ಲಿ ಕೇವಲ 11,879 ಶೌಚಾಲಯಗಳನ್ನು ಮಾತ್ರ ನಿರ್ಮಾಣ ಮಾಡಲು ಸಾಧ್ಯವಾಗಿದೆ.
ಸರ್ಕಾರದಿಂದ ನೆರವು: ಶೌಚಾಲಯ ನಿರ್ಮಾಣಕ್ಕಾಗಿ ಎನ್ಆರ್ಇಜಿಯಡಿಯಲ್ಲಿ ಪ್ರತಿಯೊಂದು ಶೌಚಾಲಯ ನಿರ್ಮಾಣಕ್ಕಾಗಿ 5400, ನಿರ್ಮಲ ಭಾರತ ಯೋಜನೆಯಡಿಯಲ್ಲಿ 4700 ನೀಡಲಾಗುತ್ತಿದೆ. ಇದರ ಜತೆಗೆ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ 5 ಸಾವಿರ ನೀಡಲಾಗುತ್ತಿದೆ. ಒಟ್ಟಾರೆ 15,100 ಅನುದಾನ ನೀಡಲು ಅವಕಾಶ ಇದ್ದರೂ ಬಹಳಷ್ಟು ಕಡೆಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ. ಇಂದಿಗೂ ಬಯಲು ಮಲ ವಿಸರ್ಜನೆಯಲ್ಲಿಯೇ ತೊಡಗಿದ್ದಾರೆ.
ಜಿಲ್ಲೆಯಲ್ಲಿ 2,11,070 ಮನೆಗಳಿದ್ದು, ಈ ಪೈಕಿ 1,32,320 ಮನೆಗಳು ಶೌಚಾಲಯ ಹೊಂದಿವೆ. ಅಂದರೆ, ಶೇ. 62.69 ರಷ್ಟು ಪ್ರಗತಿ ಸಾಧಿಸಲಾಗಿದೆ. ಇಂದಿಗೂ 78,750 ಮನೆಗಳಲ್ಲಿ ಶೌಚಾಲಯಗಳಿಲ್ಲ. ಈಗಾಗಲೇ ನಿರ್ಮಾಣಗೊಂಡಿರುವ 1,32,320 ಶೌಚಾಲಯಗಳಲ್ಲಿ 1,29,685 ಶೌಚಾಲಯಗಳು ಮಾತ್ರ ಬಳಕೆಯಾಗುತ್ತಿವೆ.
ಗುರಿ, ಪ್ರಗತಿ: ಜಿಲ್ಲೆಯ ಏಳು ತಾಲೂಕುಗಳ ಪೈಕಿ ಕಡೂರು ತಾಲೂಕಿನಲ್ಲಿ ಹೆಚ್ಚಿನ ಮಂದಿ ಇಂದಿಗೂ ಬಯಲು ಮಲ ವಿಸರ್ಜನೆಯಲ್ಲಿ ತೊಡಗಿದ್ದಾರೆ.
ಶೌಚಾಲಯ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಿರ್ಮಲ ಭಾರತ ಯೋಜನೆಯಡಿಯಲ್ಲಿ ಹಲವು ಹಂತಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲು ಗ್ರಾಮ ಪಂಚಾಯಿತಿ, ತಾಲೂಕು, ಜಿಲ್ಲಾವಾರು ಪ್ರಶಸ್ತಿ ನೀಡುತ್ತಿದೆ. ಹಲವೆಡೆ ಕಾರ್ಯಾಗಾರವನ್ನು ಸಹ ಇಲಾಖೆಯಿಂದ ನಡೆಸಲಾಗುತ್ತಿದೆ. ಆದರೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ.
ಶೌಚಾಲಯ ನಿರ್ಮಾಣದಲ್ಲಿ ಹಿನ್ನಡೆ ಸಾಧಿಸಿರುವ ಕಡೂರು ತಾಲೂಕಿನ ಕೆಲವು ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಕೆಲವು ಮನೆಗಳಿಗೆ ಜಾಗದ ಕೊರತೆ ಇದೆ. ಅಂತಹ ಕಡೆ ಸಮುದಾಯ ಶೌಚಾಲಯ ನಿರ್ಮಾಣ ಮಾಡಲು ಅವಕಾಶ ಇದೆ. ಆದರೆ, ನಿರ್ವಹಣೆಯ ಕೊರತೆಯಿಂದಾಗಿ ಈ ಪ್ರಯತ್ನ ಯಶಸ್ವಿಯಾಗುತ್ತಿಲ್ಲ. ಅಜ್ಜಂಪುರ, ಹರಿಹರಪುರ ಹಾಗೂ ಸಖರಾಯಪಟ್ಟಣಗಳಂತಹ ಪ್ರದೇಶಗಳಲ್ಲಿ ಮಾತ್ರ ಸಮುದಾಯ ಶೌಚಾಲಯಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇನ್ನುಳಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಈ ವ್ಯವಸ್ಥೆ ಯಶಸ್ವಿಗೊಳಿಸಲು ಸಾಧ್ಯವಾಗುತ್ತಿಲ್ಲ. ಅದುದರಿಂದ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಉತ್ತೇಜನ ಮತ್ತು ಪ್ರೋತ್ಸಾಹ ನೀಡಲಾಗುತ್ತಿದೆ. ಆದರೂ ಜನ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಮುಂದೆ ಬರುತ್ತಿಲ್ಲ.
ಹಿನ್ನಡೆಗೆ ಕಾರಣಗಳೇನು?
ಹಳೆಯ ಪದ್ಧತಿ: ಗ್ರಾಮಾಂತರ ಪ್ರದೇಶಗಳಲ್ಲಿರುವ ಕೆಲವು ಸಂಪ್ರದಾಯಸ್ಥ ಕುಟುಂಬಗಳು ಮನೆಯೊಳಗೆ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಒಪ್ಪಿಕೊಳ್ಳುತ್ತಿಲ್ಲ.
ಅವಿಭಕ್ತ ಕುಟುಂಬ: 2005ರ ಅಂಕಿ- ಅಂಶದ ಪ್ರಕಾರ ಜಿಲ್ಲೆಯಲ್ಲಿ ಇದ್ದ ಮನೆಗಳ ಸಂಖ್ಯೆಗೂ, ಈಗಿನ ಮನೆಗಳ ಸಂಖ್ಯೆಗೂ ಸಂಖ್ಯೆ ಹೆಚ್ಚಳವಾಗಿದೆ. ಕೆಲವು ಕಡೆಗಳಲ್ಲಿ ಅವಿಭಕ್ತ ಕುಟುಂಬಗಳು, ವಿಭಕ್ತ ಕುಟುಂಬಗಳಾಗಿವೆ. ಅಂತಹವುಗಳನ್ನು ಶೌಚಾಲಯ ರಹಿತ ಕುಟುಂಬಗಳೆಂದು ಪರಿಗಣಿಸಲಾಗುತ್ತಿದೆ. ಅದುದರಿಂದ ಶೌಚಾಲಯ ರಹಿತ ಮನೆಗಳ ಸಂಖ್ಯೆ ಅಧಿಕವಾಗಿದೆ.
ಜಾಗದ ಕೊರತೆ: ಗ್ರಾಮಾಂತರ ಪ್ರದೇಶಗಳಲ್ಲಿ ಈ ಹಿಂದೆಯೇ ಮನೆಗಳು ನಿರ್ಮಾಣಗೊಂಡಿದ್ದು, ಅವುಗಳು ಶೌಚಾಲಯಗಳಿಗಾಗಿ ಜಾಗವನ್ನು ಪ್ರತ್ಯೇಕವಾಗಿ ಬಿಟ್ಟಿರುವುದಿಲ್ಲ.
ತಾಲೂಕುವಾರು ಗುರಿ, ಪ್ರಗತಿಯ ವಿವರ
ಚಿಕ್ಕಮಗಳೂರು 5800 4754 1046
ಕಡೂರು 11,000 2801 8199
ಕೊಪ್ಪ 1353 445 908
ಮೂಡಿಗೆರೆ 2900 1626 1274
ಎನ್.ಆರ್. ಪುರ 1633 159 1474
ಶೃಂಗೇರಿ 726 352 374
ತರೀಕೆರೆ 6588 1742 4846
-ಆರ್. ತಾರಾನಾಥ್