ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರವಿಲ್ಲ

Vishwanath S
Updated On : 1 Mar 2014, 11:29 am

ತರೀಕೆರೆ: ಸಬ್‌ರಿಜಿಸ್ಟ್ರಾರ್ ಕಚೇರಿ ಬೇರೆಡೆಗೆ ಸ್ಥಳಾಂತರ ಮಾಡುವುದಿಲ್ಲ ಎಂದು ಉಪವಿಭಾಗಾಧಿಕಾರಿ ಅನುರಾಧ ತಿಳಿಸಿದ್ದಾರೆ.
ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರ ಕುರಿತು ಶುಕ್ರವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕರು, ರೈತರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಮಿನಿ ವಿಧಾನಸೌಧದಲ್ಲಿ ಈಗಿರುವ ಸ್ಥಳದಲ್ಲಿಯೇ ಸಬ್‌ರಿಜಿಸ್ಟ್ರಾರ್ ಕಚೇರಿ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ತಾವು ರಾಜ್ಯ ಮಹಾಲೇಖಪಾಲ ನೋಂದಣಾಧಿಕಾರಿ ಜೊತೆ ಮಾತುಕತೆ ನಡೆಸಲಾಗಿದೆ. ಮಿನಿ ವಿಧಾನ ಸೌಧದ ಆವರಣದಲ್ಲಿಯೇ ವಿಶಾಲವಾದ ಕಟ್ಟಡ ನಿರ್ಮಾಣ ಕುರಿತು ಎಲ್ಲ ರೀತಿಯ ಪ್ರಯತ್ನ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಒತ್ತಾಯ:  ಮಾಜಿ ಶಾಸಕ ಬಿ.ಆರ್. ನೀಲಕಂಠಪ್ಪ ಮಾತನಾಡಿ ಸಬ್‌ರಿಜಿಸ್ಟ್ರಾರ್ ಕಚೇರಿ ಸ್ಥಳಾಂತರದಿಂದ ಸಾರ್ವಜನಿಕರಿಗೆ ಮುಜುಗರವಾಗುತ್ತದೆ. ಗ್ರಾಮೀಣ ರೈತರು ಸಾರ್ವಜನಿಕರು ವಿವಿಧ ದಾಖಲೆಗಳಿಗಾಗಿ ಕಚೇರಿಯಿಂದ ಕಚೇರಿಗೆ ವಿನಾಕಾರಣ ಅಲೆದಾಡಬೇಕಾಗುತ್ತದೆ. ಆದ್ದರಿಂದ ಕಚೇರಿ ಸ್ಥಳಾಂತರ ಬೇಡ ಎಂದು ಒತ್ತಾಯಿಸಿದರು.
ಎನ್.ರಾಜು ಮಾತನಾಡಿ, ಸಬ್‌ರಿಜಿಸ್ಟಾರ್ ಕಚೇರಿ ಸ್ಥಳಾಂತರ ಮಾಡಕೂಡದು ಎಂದು ಆಗ್ರಹಿಸಿದರು. ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿ, ತಾಲೂಕು ಕಚೇರಿ ಜೊತೆಗೆ ಸಬ್ ರಿಜಿಸ್ಟ್ರಾರ್ ಕಚೇರಿ ಇರಬೇಕಾದುದು ಸಮರ್ಪಕ ಆಡಳಿತ ವ್ಯವಸ್ಥೆಯ ಗುರಿಯೂ ಆಗಿದೆ ಎಂದು ತಿಳಿಸಿದರು.
ಸುರಕ್ಷಿತವಾಗಿದೆ:  ಮಾಜಿ ಪುರಸಭಾಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಜನರ ಅಭಿಪ್ರಾಯವನ್ನು ಅಧಿಕಾರಿಗಳು ಗೌರವಿಸಬೇಕು. ಜನರಿಗೆ ಸಮರ್ಪಕ ಅಡಳಿತ ವ್ಯವಸ್ಥೆ ಕಲ್ಪಿಸಬೇಕು. ಕಚೇರಿ ಸ್ಥಳಾಂತರ ನಿಲುಗಡೆಯಾಗಿತ್ತು. ಇದಕ್ಕೆ ಮತ್ತೆ ಜೀವ ಬಂದದ್ದು ಹೇಗೆ? ಬಿ.ಎಚ್. ರಸ್ತೆ ತುಂಬಾ ಅಪಘಾತ ವಲಯವಾಗಿದೆ, ಕಚೇರಿ ಸ್ಥಳಾಂತರದಿಂದ ನಾಗರಿಕರಿಗೆ ತೊಂದರೆ ಆಗುತ್ತದೆ. ಸ್ಥಳಾಂತರಕ್ಕೆ ಜನರ ವಿರೋಧ ಕೂಡ ಇದೆ. ಈಗಿರುವ ಸ್ಥಳ ಎಲ್ಲ ದೃಷ್ಟಿಯಿಂದಲೂ ಸುರಕ್ಷಿತವಾಗಿದೆ. ಆದ್ದರಿಂದ ಕಚೇರಿ ಸ್ಥಳಾಂತರ ಬೇಡ ಎಂದು ಒತ್ತಾಯಿಸಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಲ್.ರಮೇಶ್, ಮ್ಯಾಮ್‌ಕೋಸ್ ನಿರ್ದೇಶಕ  ಆರ್.ದೇವಾನಂದ್, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಯ್ಯಣ್ಣ, ಹಿರಿಯ ಕಲಾವಿದ ಬೇಲೇನಹಳ್ಳಿ ಸೋಮಶೇಖರ್, ಟಿ.ಜಿ.ಮಂಜುನಾಥ್ ಮತ್ತಿತರರು ಮಾತನಾಡಿದರು.
ಮಾಜಿ ಪುರಸಭಾಧ್ಯಕ್ಷ ಟಿ.ಆರ್. ನಾಗರಾಜ್, ಟಿ.ಎಸ್. ಯಶೋಧರಮೂರ್ತಿ, ಕೋಟಿ ರಘು, ಸಾರ್ವಜನಿಕರು, ರೈತರು, ತಹಸೀಲ್ದಾರ್ ಶಿವಕುಮಾರ್, ಜಿಲ್ಲಾ ನೋಂದಣಾಧಿಕಾರಿ ಪೂಜಾರ್, ಉಪ ನೋಂದಣಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement