ಅಂಗವಿಕಲರಿಗೆ ಪ್ರೋತ್ಸಾಹ ಅವಶ್ಯ
ಕಡೂರು: ಅಂಗವೈಕಲ್ಯವುಳ್ಳ ವ್ಯಕ್ತಿಗಳಿಗೆ ಸಮಾಜದ ಅನುಕಂಪಕ್ಕಿಂತ ಬೆಂಬಲ ಹಾಗೂ ಪ್ರೋತ್ಸಾಹ ದೊರೆತಲ್ಲಿ ತಮ್ಮ ಪ್ರತಿಭಾ ಸಾಮರ್ಥ್ಯದಿಂದ ಅವರೂ ಕೂಡ ಸಮಾಜದಲ್ಲಿ ಬೆಳೆಯುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್ ಹೇಳಿದರು.
ಪಟ್ಟಣದಲ್ಲಿ ಡಾ. ವಿಷ್ಣು ಸೇನಾ ಸಮಿತಿ ಆಯೋಜಿಸಿದ್ದ ಜನಪ್ರಿಯ ನಟ ದಿ. ಡಾ.ವಿಷ್ಣುವರ್ಧನ್ ಅವರ 4ನೇ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅಂಗವಿಕಲ ಮಕ್ಕಳಿಗೆ ಕ್ರೀಡಾ ಹಾಗೂ ಶಾಲಾ ಪರಿಕರಗಳನ್ನು ವಿತರಿಸಿ ಅವರು ಮಾತನಾಡಿದರು.
ಅತಿಥಿಗಳಾಗಿದ್ದ ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಪುಟ್ಟಣ್ಣ ಕಣಗಾಲ್ ಅವರ ಶೋಧ ಮುಕುಟಮಣಿ ಡಾ.ವಿಷ್ಣುವರ್ಧನ್ ಅವರು ತಮ್ಮ ನಟನೆಯಿಂದ ಕನ್ನಡ ನಾಡಿಗೆ ಹಾಗೂ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ ಅಪಾರ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷೆಯ ಉಳಿವಿಗೆ ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿ ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ಕನ್ನಡ ತಾಯಿಯ ಸೇವೆ ಮಾಡಿದ್ದರು ಎಂದರು.
ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಆನಂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಸದಸ್ಯ ರೇಣುಕಾರಾಧ್ಯ, ಮಾಜಿ ಸದಸ್ಯ ಕೆ.ಎಚ್. ರಂಗನಾಥ್, ಸಮಿತಿ ಕಾರ್ಯಾಧ್ಯಕ್ಷ ಕೋಳಿ ಮುದಿಯಪ್ಪ ಮಾತನಾಡಿದರು.
ಸೊಸೈಟಿ ರವಿ, ಸಮಿತಿ ಕಾರ್ಯದರ್ಶಿ ಚೆಲುವರಾಜ್, ಉಪಾಧ್ಯಕ್ಷ ಮಂಜುನಾಥ್, ನಾಗೇಶ್, ಆಟೋ ಸಂಘದ ಅಧ್ಯಕ್ಷ ರಮೇಶ್, ಅಣ್ಣಯ್ಯ, ವಾಸು ಮತ್ತಿತರರು ಉಪಸ್ಥಿತರಿದ್ದರು.