ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಿಗ್ಗಾದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ

Lingaraj Badiger
Updated On : 2 Jan 2014, 11:24 am

ಶೃಂಗೇರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರೋಟರಿ ಕ್ಲಬ್, ಜೆಸಿಐ ಸಹಯೋಗದೊಂದಿಗೆ ಮರ್ಕಲ್ ಪಂಚಾಯಿತಿ ಕಿಗ್ಗಾದಲ್ಲಿ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಯಿತು. ಜೆಸಿಐ ಅಧ್ಯಕ್ಷ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಏಡ್ಸ್ ಕುರಿತು ಜನರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸಬೇಕು. ಏಡ್ಸ್ ರೋಗಿಗಳನ್ನು ಮಾನವೀಯತೆಯಿಂದ ಕಾಣಬೇಕು ಎಂದು ಆಗ್ರಹಿಸಿದರು. ಏಡ್ಸ್ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು. ಈ ನಿಟ್ಟಿನಲ್ಲಿ ವೈದ್ಯಾಧಿಕಾರಿಗಳು, ಸಂಘ ಸಂಸ್ಥೆಗಳು ಆಸಕ್ತಿವಹಿಸಲಿ ಎಂದರು. ಡಾ. ಅನಿತ್ ಕುಮಾರ್ ಮಾತನಾಡಿ, ಸಂಸ್ಕರಿಸದ ಸೂಜಿ ಬಳಕೆಯಿಂದ, ರಕ್ತ ಕೊಡುವುದರಿಂದ, ಅಸಮರ್ಪಕ ಲೈಂಗಿಕ ಸಂಪರ್ಕದಿಂದ ಏಡ್ಸ್ ರೋಗ ಹರಡುತ್ತದೆ ಈ ಕುರಿತು ಜಾಗೃತಿ ಅಗತ್ಯ ಎಂದರು. ರೋಟರಿ ಅಧ್ಯಕ್ಷ ಮಹೇಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಿಗ್ಗಾ ವಲಯ ಮೇಲ್ವಿಚಾರಕ ಐತಪ್ಪ, ವಾಣಿ, ಸರ್ವಮಂಗಳ ಇದ್ದರು.
ಜುಂಜಪ್ಪ ಜಾತ್ರೆ
ತರೀಕೆರೆ: ಸಮೀಪದ ಭಕ್ತನಕಟ್ಟೆ ಶ್ರೀ ಜುಂಜಪ್ಪ ದೇವರ ತಿಂಗಳ ಜಾತ್ರಾ ಮಹೋತ್ಸವವನ್ನು ಭಕ್ತನಕಟ್ಟೆಯಲ್ಲಿ ಏರ್ಪಡಿಸಲಾಗಿತ್ತು. ಶ್ರೀ ಜುಂಜಪ್ಪ ದೇವರ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಜಿ. ಅನುರಾಧ ಅವರ ಮಾರ್ಗದರ್ಶನದಲ್ಲಿ ಜಾತ್ರೆ ನಡೆಸಲಾಯಿತು. ತಹಸೀಲ್ದಾರ್ ಶಿವಕುಮಾರ್ ಅವರ ಸೂಚನೆಯಂತೆ ಶಿವನಿ ಹೋಬಳಿ ಉಪ ತಹಸೀಲ್ದಾರ್ ಆಂಜನೇಯ ಭಕ್ತಾದಿಗಳಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಜಾತ್ರೆಯ ಸಂಪೂರ್ಣ ಕೆಲಸ ಕಾರ್ಯಗಳನ್ನು ನಿರ್ವಹಿಸಿದರು. ಆರೋಗ್ಯ ಇಲಾಖೆ, ಪಶುವೈದ್ಯ ಇಲಾಖೆ, ಪೊಲೀಸ್ ಇಲಾಖೆ ಕಂದಾಯ ಇಲಾಖೆ, ರಾಜಸ್ವ ನಿರೀಕ್ಷಕ ಲೋಕೇಶ್ ನಾಯ್ಕ, ಗ್ರಾಮಲೆಕ್ಕಿಗ ಕೃಷ್ಣಮೂರ್ತಿ  ಭಾಗವಹಿಸಿದ್ದರು. ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಜುಂಜಪ್ಪ ದೇವರ ಕಾಣಿಕೆಯನ್ನು ಎಣಿಸಲಾಯಿತು.

ವಿದ್ಯಾರ್ಥಿಗಳಲ್ಲಿ ವಿನಯ, ವಿಧೇಯತೆ ಬೆಳೆಸಿ: ಸಂಸದ ಹೆಗ್ಡೆ
ಚಿಕ್ಕಮಗಳೂರು: ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ವಿನಯ ಮತ್ತು ವಿಧೇಯತೆಯನ್ನೂ ಕಲಿಯಬೇಕು. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ನಗರದ ವಿಶ್ವವಿದ್ಯಾಲಯ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ಉಚಿತ ಸೈಕಲ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ನಂಜುಂಡಸ್ವಾಮಿ ಶಾಲೆಯಲ್ಲಿ 800 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಪ್ರತಿ ವರ್ಷ ಅವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಂಸ್ಥೆಯಲ್ಲಿ ಕೊಠಡಿಗಳ ಕೊರತೆಯಿದೆ ಎಂದರು.
ಈ ಹಿನ್ನೆಲೆಯಲ್ಲಿ 4 ಕೊಠಡಿಗಳ ಅವಶ್ಯಕತೆಯಿದ್ದು ಅದರ ನಿರ್ಮಾಣಕ್ಕೆ ತಮ್ಮ ನಿಧಿಯಿಂದ 5 ಲಕ್ಷ ಅನುದಾನ ನೀಡುವಂತೆ ಲೋಕಸಭಾ ಸದಸ್ಯರಿಗೆ ಮನವಿ ಮಾಡಿದರು. 109 ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ಗಳನ್ನು ವಿತರಿಸಲಾಯಿತು. ನಗರಸಭೆ ಸದಸ್ಯ ಭುಜಂಗರಾಜ ಅರಸ್, ಸಂಸ್ಥೆಯ ಗೌರವ ಕಾರ್ಯದರ್ಶಿ ರಾಮಚಂದ್ರ, ಮುಖ್ಯ ಶಿಕ್ಷಕ ಆರ್. ಶ್ರೀನಿವಾಸ್, ಯುವ ಕಾಂಗ್ರೇಸ್ ಮುಖಂಡ ಬಿ.ಎಂ. ಸಂದೀಪ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement