ಪರಿಸರ ಕಾಳಜಿಗೆ ಮಲೆನಾಡಿನಲ್ಲಿ ಶಿಬಿರ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.1
ದೇಶ ಜಾತಿ ವ್ಯವಸ್ಥೆ, ಭ್ರಚ್ಟಾಚಾರದಲ್ಲಿ ಸಿಕ್ಕಿ ನಲುಗುತ್ತಿದ್ದು, ಯುವಕರು ದೇಶವನ್ನು ಸನ್ಮಾರ್ಗದಲ್ಲಿ ನಡೆಸಿ ಮುನ್ನಡೆಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಎನ್. ಮಹೇಶ್ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಚಿಕ್ಕಮಗಳೂರು ಜಿಲ್ಲಾ ಸಂಸ್ಥೆಯ ವತಿಯಿಂದ ಕಳಸದ ಕಳಸೇಶ್ವರ ಸಭಾ ಭವನದಲ್ಲಿ ಮಂಗಳವಾರ ಮುಕ್ತಾಯಗೊಂಡ ಐದು ದಿನಗಳ ರಾಜ್ಯ ಮಟ್ಟದ ರೋವರ್ಸ್ ಮತ್ತು ರೇಂಜರ್ಸ್ ಚಾರಂ ಹಾಗೂ ಪ್ರಕೃತಿ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಸರ ಪ್ರೇಮ: ನಮ್ಮ ಪರಿಸರ, ನಿಸರ್ಗ ಸಂಪತ್ತು, ಪ್ರಾಣಿ ಪಕ್ಷಿ ಸಂಕುಲ, ಕಾಡಿನ ಬಗ್ಗೆ ವಿಶೇಷ ಪ್ರೇಮವನ್ನು ಹೊಂದುವಂತಾಗಬೇಕೆಂಬ ಉದ್ದೇಶದಿಂದ ಮಲೆನಾಡಿನಲ್ಲಿ ಈ ಶಿಬಿರ ಆಯೋಜಿಸಲಾಗಿದ್ದು, ಈ ಮೂಲಕ ಈ ನೆಲ ಮಣ್ಣಿನ ಬಗ್ಗೆ ಪ್ರೀತಿಯನ್ನು ಹೊಂದಬೇಕೆಂಬುದು ಉದ್ದೇಶವಾಗಿ ಸ್ಕೌಟ್ಸ್ ಸಂಸ್ಥೆ ಶಿಸ್ತು ಸಂಯಮವನ್ನು ಕಲಿಸುವ ಕಾರ್ಯ ಚಟುವಟಿಕೆಯ ಜೊತೆಯಲ್ಲಿ ನಾಡು ನುಡಿ ದೇಶಪ್ರೇಮವನ್ನು ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಮೂಡಿಗೆರೆ ತಾಲೂಕು ಪಂಚಾಯ್ತಿ ಅಧ್ಯಕ್ಷ ಎ.ಎಂ. ಶೇಷಗಿರಿ, ವಿದ್ಯಾರ್ಥಿಗಳಲ್ಲಿ ಗುರಿಯನ್ನು ಸಾಧಿಸುವ ಛಲವಿರಬೇಕು. ಈ ಸಂಘಟನೆಯಲ್ಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಒಟ್ಟಿಗೆ ಕಲೆತು ಬೆರೆತು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬಿಂಬಿಸುತ್ತಿರುವುದು ವಿಶೇಷವೆಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಉಷಾ ಸುಂದರ ಮಾತನಾಡಿ, ಪ್ರಕೃತಿಯ ತಾಣದಲ್ಲಿ ಚಾರಣ ಮಾಡಿ ಪ್ರಕೃತಿ ಅಧ್ಯಯನ ಮಾಡುವುದಲ್ಲದೆ ಅಲ್ಲಿರುವ ಪ್ರಕೃತಿಯನ್ನು ನೈಸರ್ಗಿಕ ಸಂಪತ್ತನ್ನು ಉಳಿಸುವ ಕಾರ್ಯ ನಿಮ್ಮದಾಗಬೇಕು ಎಂದು ತಿಳಿಸಿದರು.
ರಾಜ್ಯ ಸ್ಕೌಟ್ಸ್, ಗೈಡ್ಸ್ ಸಂಘಟನಾ ಆಯುಕ್ತರಾದ ಜಾನಕಿ ವೇಣುಗೋಪಾಲ್ ಹಾಗೂ ಮಂಜುನಾಥ್ ಆಚಾರ್, ಕಳಸಾ ತಾಲ್ಲೂಕು ಪಂಚಾಯ್ತಿ ಸದಸ್ಯೆ ಅನ್ನಪೂರ್ಣ ಶ್ರೀಧರ್, ರಾಜ್ಯ ಸಹಾಯಕ ಆಯುಕ್ತರಾದ ಲೋಕೇಶ್ ಮಾತನಾಡಿದರು. ಜಿಲ್ಲಾ ಸಂಘಟಕ ಕಿರಣ್ ಕುಮಾರ್, ರಾಜ್ಯ ಸಂಚಾಲಕ ಬಾಲಕೃಷ್ಣ, ಕೃಷ್ಣ, ಗ್ರಾಮ ಪಂಚಾಯ್ತಿ ಸದಸ್ಯೆ ಸುವರ್ಣಮ್ಮ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ಸ್ಕೌಟರ್ ನೀಲಕಂಠಾಚಾರ್ ಸ್ವಾಗತಿಸಿದರು, ಭಾರತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ತರಬೇತಿ ಆಯುಕ್ತೆ ಸಂಧ್ಯಾರಾಣಿ ವಂದಿಸಿದರು.