ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬೀರೂರು ತಾಲೂಕು ಕೇಂದ್ರವಾಗಲಿ

Lingaraj Badiger
Updated On : 2 Jan 2014, 11:18 am

ಕ.ಪ್ರ.ವಾರ್ತೆ, ಕಡೂರು, ಜ.1
ಬೀರೂರನ್ನು ತಾಲೂಕು ಕೇಂದ್ರ ಮಾಡುವುದು, ಹೆಬ್ಬೆ ಯೋಜನೆ ಜಾರಿ, ಅಡಕೆ ನಿಷೇಧಕ್ಕೆ ವಿರೋಧ, ಅಗತ್ಯ ವೈದ್ಯರ ನೇಮಕ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಗಮನ ಸೆಳೆಯಲು ತಾಲೂಕು ಕನ್ನಡ ಸೇನೆಯಿಂದ ಬೀರೂರು ಪಟ್ಟಣದಿಂದ ಕಡೂರು ಪಟ್ಟಣದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಕನ್ನಡ ಸೇನೆ ತಾಲೂಕು ಅಧ್ಯಕ್ಷ ಮೋಹನಕುಮಾರ್, ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕಡೂರು ನಗರ ಘಟಕದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಬೀರೂರಿನಿಂದ ಕಡೂರುವರೆಗೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಪ್ರವಾಸಿ ಮಂದಿರ ರಸ್ತೆ ಮೂಲಕ ಕಡೂರು ತಾಲೂಕು ಕಚೇರಿ ಮುಂದೆ ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ಮುಖಂಡರು, ಬೀರೂರನ್ನು ತಾಲೂಕನ್ನಾಗಿ ರಚಿಸಬೇಕು. ಸರ್ಕಾರದ ಕನ್ನಡ ಶಾಲಾ -ಕಾಲೇಜುಗಳಿಗೆ ಅಗತ್ಯ ಮೂಲಭೂತ ಸವಲತ್ತು ಒದಗಿಸಬೇಕು. ಗ್ರಾಮಾಂತರದಿಂದ ಬರುವ ಶಾಲಾ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ವಿಳಂಬವಾಗುತ್ತಿರುವ ಹೆಬ್ಬೆ ಯೋಜನೆಯನ್ನು ರಾಜ್ಯ ಸರ್ಕಾರವು ಕೂಡಲೇ ಮಂಜೂರು ಮಾಡಿ ಜಾರಿಗೊಳಿಸಬೇಕು. ಅಡಕೆ ನಿಷೇಧಕ್ಕೆ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಸೇನೆಯಿಂದ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಬೀರೂರಿನ ಲಿಂಗದಹಳ್ಳಿ ಮತ್ತು ಅಜ್ಜಂಪುರ ರಸ್ತೆ ದುರಸ್ತಿಗೊಳಿಸಬೇಕು. ಬೀರೂರು ಪಟ್ಟಣದ ಭಗವತ್ ನಗರದ ರೇಲ್ವೆ ಕ್ವಾರ್ಟಸ್ ಪಕ್ಕದ ರಸ್ತೆಯನ್ನು ತೆರವುಗೊಳಿಸಿ ಬೀರೂರಿನ ಎಸ್.ಆರ್. ಲಕ್ಷ್ಮಯ್ಯ ಬಡಾವಣೆ ನಿವೇಶನಗಳನ್ನು ಪಾರದರ್ಶಕವಾಗಿ ಹಂಚಬೇಕು. ಕಡೂರು ಬೀರೂರು ಸಾರ್ವಜನಿಕ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರನ್ನು ನೇಮಿಸಬೇಕು. ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಬೀರೂರು ಪುರಸಭೆ ಅಧೀನದ ವಾಣಿಜ್ಯ ಮಳಿಗೆಗಳನ್ನು ಮುಕ್ತವಾಗಿ ಹರಾಜು ಮಾಡಬೇಕು. ಸರ್ಕಾರಿ ಕಚೇರಿಗಳಲ್ಲಿ ಹಲವಾರು ವರ್ಷದಿಂದ ಬೀಡುಬಿಟ್ಟು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಇರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ ಆಗುತ್ತಿವೆ. ಆದ್ದರಿಂದ ಅವರನ್ನು ಕೂಡಲೇ ವರ್ಗಾವಣೆಗೊಳಿಸಿ ಹೊಸಬರನ್ನು ನಿಯೋಜಿಸಬೇಕು. ಕಡೂರು ತಾಲೂಕಿನಲ್ಲಿ ಕನ್ನಡಿಗರ ಭವನ ನಿರ್ಮಿಸಬೇಕು ಎಂದ ಮುಂಖಡರು, ಶೋಷಣೆಗೆ ಒಳಗಾದವರು ಮತ್ತು ಸಮಾಜಕ್ಕೆ ಅನ್ಯಾಯ ಎಸಗುವವರ ವಿರುದ್ಧ ಕನ್ನಡ ಸೇನೆಯು ಸದಾ ಎಚ್ಚರಿಕೆಯಿಂದ ಕಾಯತ್ತಿದ್ದು, ಆ ಮೂಲಕ ಸೇವೆ ಮಾಡಲು ಸಿದ್ಧವಾಗಿರುವ ಕನ್ನಡ ಸೇನೆಯ ಬೇಡಿಕೆಗಳನ್ನು ಈಡೇರಿಸಬೇಕು. ವಿಳಂಬ ಮಾಡಿದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಸಂಘ ಸಂಸ್ಥೆಗಳೊಂದಿಗೆ ಹಾಗೂ ಸಾರ್ವಜನಿಕ ಸಹಕಾರದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿರು.
ಬಳಿಕ ತಹಸೀಲ್ದಾರ್ ತಿಮ್ಮಾಭೋವಿ ಅವರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಿದರು. ಸೇನೆಯ ಬೀರೂರು ಹೋಬಳಿ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಬಿ.ಮಧು, ತಾಲೂಕು ಸಂಘಟನಾ ಕಾರ್ಯದರ್ಶಿ ಗಿರೀಶ್, ಹೋರಿ ತಿಮ್ಮನಹಳ್ಳಿ ಶ್ರೀನಿವಾಸ್ ಹಾಗೂ ತರೀಕೆರೆ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement