ವಿಪತ್ತು ಸಂಭವಿಸುವ ಮುನ್ನ ಜಾಗೃತರಾಗಿ
ಚಿಕ್ಕಮಗಳೂರು: ಮಾನವ ನಿರ್ಮಿತ ವಿಪತ್ತುಗಳ ಕುರಿತು ಪೋಷಕರು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಹೇಳಿದ್ದಾರೆ.
ಜಿಲ್ಲಾ ಗೃಹ ರಕ್ಷಕದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಆಶ್ರಯದಲ್ಲಿ ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ವಿಪತ್ತು ಕಡಿತಗೊಳಿಸುವ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಪತ್ತು ಸಂಭವಿಸುವ ಸಮಯದಲ್ಲಿ ಮುಂಜಾಗ್ರತೆ ವಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದರು.
ಇಂದಿನ ಸಮಯದಲ್ಲಿ ನಿಸರ್ಗ ಮತ್ತು ಯುದ್ಧ ವಿಪತ್ತು ಸಂಭವಿಸುವುದು ಹೆಚ್ಚಾಗುತ್ತಿದ್ದು, ಇಂತಹ ವಿಪತ್ತು ಎದುರಿಸಲು ವಿವಿಧ ಕ್ರಮ ಮತ್ತು ಮಾರ್ಗ ಅನುಸರಿಸುತ್ತಿರುವುದು ಸಾಲದು. ಅದರಲ್ಲಿಯೂ ಮಾನವ ನಿರ್ಮಿತ ಬೆಂಕಿ ಮತ್ತು ಸ್ಫೋಟದಂತಹ ವಿಪತ್ತುಗಳ ಸಮಯದಲ್ಲಿ ಗೃಹ ರಕ್ಷಕ ಮತ್ತು ಅಗ್ನಿಶಾಮಕ ದಳದ ಸೇವೆ ಶ್ಲಾಘನೀಯವೆಂದರು.
ಇಂದಿನ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ವಿಪತ್ತು ನಿರ್ವಹಣೆಯ ಕುರಿತು ಜಾಗೃತಿ ಮೂಡಿಸುವುದು ಅಗತ್ಯವಾಗಿರುವುದರಿಂದ ಇಂತಹ ಕಾರ್ಯಕ್ರಮಗಳಲ್ಲಿ ಅವರನ್ನು ಹೆಚ್ಚಾಗಿ ತೊಡಗಿಸಿಕೊಳ್ಳಬೇಕೆಂದರು.
ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಟಿ.ಕೆ. ಫಣಿರಾಜ್ ಮಾತನಾಡಿ, ವಿಪತ್ತುಗಳ ಕುರಿತು ಅರಿವು ಮೂಡಿಸಲು ಗೃಹ ರಕ್ಷಕದಳ ಜತೆಗೆ ವಿದ್ಯಾರ್ಥಿಗಳು ಕೈಜೋಡಿಸಬೇಕೆಂದರು.
ಶೀಘ್ರವೇ ಭರ್ತಿ: ನಗರ ಪ್ರದೇಶಕ್ಕಿಂತ ಗ್ರಾಮಿಣ ಪ್ರದೇಶದ ಯುವಜನತೆ ಗೃಹ ರಕ್ಷಕ ದಳಕ್ಕೆ ಸೇರ್ಪಡೆಯಾಗುತ್ತಿದ್ದು, ಖಾಲಿ ಇರುವ 125 ಹುದ್ದೆಗಳಿಗೆ ಅರ್ಜಿಗಳು ಬಂದಿದ್ದು, ಶೀಘ್ರವೇ ಅವುಗಳನ್ನು ಭರ್ತಿ ಮಾಡಲಾಗುವುದೆಂದರು.
ಚಿಕ್ಕಮಗಳೂರು ನಗರದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಘಟಕ ಸ್ಥಾಪಿಸಲಾಗುವುದು ಮತ್ತು ಸ್ವಂತ ಕಟ್ಟಡಕ್ಕೆ ಚಾಲನೆ ನೀಡಲಾಗುವುದೆಂದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಹೊನಕೇರಿ ಬಹುಮಾನ ವಿತರಿಸಿದರು. ಪ್ರಾಚಾರ್ಯ ವಾಸುದೇವ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರುದ್ರಸ್ವಾಮಿ ಉಪಸ್ಥಿತರಿದ್ದರು.
ಪಥಸಂಚಲನದಲ್ಲಿ ವಿಶ್ವವಿದ್ಯಾಲಯ, ಮೌಂಟೆನ್ ವ್ಯೂ ಮತ್ತು ಮಾಡೆಲ್ ಇಂಗ್ಲಿಷ್ ಶಾಲೆಯ ಎನ್‌ಸಿಸಿ ತಂಡ ಭಾಗವಹಿಸಿದ್ದವು. ಕಾರ್ಯಕ್ರಮಕ್ಕೂ ಮುನ್ನ ಹಳೇ ತಾಲೂಕು ಕಚೇರಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನವರೆಗೆ ಜಾಥಾ ನಡೆಸಲಾಯಿತು.