ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವೃದ್ಧಾಶ್ರಮದಲ್ಲಿ ಹೊಸ ವರ್ಷಾಚರಣೆ

Lingaraj Badiger
Updated On : 2 Jan 2014, 11:17 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.1
ಹೊಸ ವರ್ಷಾಚರಣೆ ಎಂದಾಕ್ಷಣ ಯುವ ಜನರಿಗೆ ತಟ್ಟನೆ ಹೊಳೆಯುವುದು ಡ್ಯಾನ್ಸ್, ಗುಂಡು ಪಾರ್ಟಿ. ಆದರೆ, ಇಲ್ಲಿನ ಸಿರಿಗಾಪುರದ ಶ್ರೀ ಸಾಯಿ ಏಂಜಲ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವೃದ್ಧಾಶ್ರಮದಲ್ಲಿ ದೇವರ ಕೀರ್ತನೆಗಳೊಂದಿಗೆ ಇಳಿ ವಯಸ್ಸಿನ ಅಜ್ಜ ಅಜ್ಜಿಯರ ಜೊತೆ ಬಾವನಾತ್ಮಕವಾದ ಪ್ರೀತಿ ತೋರಿಸುವ ಮೂಲಕ ಕೆಲ ಸಮಯ ಕಳೆದು ಹೊಸ ವರ್ಷಾಚರಣೆಗೆ ಅರ್ಥ ತುಂಬಿದ್ದಾರೆ.
ಶ್ರೀ ಸಾಯಿ ಏಂಜಲ್ಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಯ ಜಂಟಿ ಕಾರ್ಯದರ್ಶಿ ಎಂ.ಜೆ. ಕಾರ್ತಿಕ್ ನೇತೃತ್ವದಲ್ಲಿ ಜೀವನ್ ಸಂಧ್ಯಾ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿದ್ದ ವೃದ್ಧರಿಗೆ ಹಣ್ಣು ಹಂಪಲು ನೀಡಿ ಆಶೀರ್ವಾದ ಪಡೆದರು.
ನಿರ್ದೇಶಕ ನಾಗೇಶ್ ಓಂಕಾರ ದೊಂದಿಗೆ ದೇವರನಾಮವನ್ನು ಹೇಳಿಕೊಡುವ ಮೂಲಕ ವೃದ್ಧರ ತಲೆದೂಗುವಂತೆ ಮಾಡಿದರು. ವಿದ್ಯಾರ್ಥಿಗಳು ವಿವಿಧ ಭಜನೆಗಳನ್ನು ಜಪಿಸಿ ಹಿರಿಯರ ಪ್ರಶಂಸೆಗೆ ಒಳಗಾದರು.
ನಂತರ ನಡೆದ ಸಮಾರಂಭದಲ್ಲಿ ನಾಗೇಶ್ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ದಾರಿ ತಪ್ಪುವಂತಹ ಯುವಕರೇ ಹೆಚ್ಚಿರುವ ಪರಿಣಾಮ ಇಂತಹ ವೃದ್ಧಾಶ್ರಮಗಳು ತಲೆ ಎತ್ತಿ ನಿಂತಿವೆ. ಪೋಷಕರ ಮತ್ತು ಹಿರಿಯರ ಪಾತ್ರದ ಬಗ್ಗೆ ವಿದ್ಯಾರ್ಥಿ ದಿಸೆಯಲ್ಲೆ ಮಕ್ಕಳಿಗೆ ಅರಿವಿದ್ದರೆ ವೃದ್ಧಾಶ್ರಮದ ಅಗತ್ಯ ಕಂಡು ಬರುವುದಿಲ್ಲ ಎಂದರು.
ಜಂಟಿ ಕಾರ್ಯದರ್ಶಿ ಎಂ.ಜೆ. ಕಾರ್ತಿಕ್ ಮಾತನಾಡಿ, ಸುಸಂಸ್ಕೃತರ ನಾಡಲ್ಲಿ ಸಂಸ್ಕಾರದ ಅರಿವು ನಮಗಿರಬೇಕು, ಹಾಲುಗಲ್ಲದ ಎಳೆ ವಯಸ್ಸಿನಲ್ಲಿ ತಂದೆ ತಾಯಂದಿರು ಅತಿಯಾದ ಪ್ರೀತಿ ತೋರಿಸಿ ನಮ್ಮನ್ನು ಬೆಳೆಸಿರುತ್ತಾರೆ. ತಮ್ಮ ಎಲ್ಲ ಆಸೆಗಳನ್ನು ಬದಿಗೊತ್ತಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಕಿಂಚಿತ್ತು ತೊಂದರೆಯಾಗದ ರೀತಿ ಪೋಷಿಸಿ ಮುಂದಿನ ಕನಸನ್ನು ಕಟ್ಟಿಕೊಂಡಿರುತ್ತಾರೆ.
ಪೋಷಕರನ್ನು ಗೌರವದಿಂದ ಕಾಣಿರಿ: ನಮಗೆ ತಿಳಿವಳಿಕೆ ಬಂದ ತಕ್ಷಣವೇ ಮನೆಯ ಹಿರಿಯರು ಪಟ್ಟ ಕಷ್ಟವನ್ನು ಲೆಕ್ಕಿಸದೆ ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾಗಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತೇವೆ. ಇಂತಹ ಪರಿಪಾಠಕ್ಕೆ ತಿಲಾಂಜಲಿ ಹಾಡಿ ನಮ್ಮನ್ನು ಸಾಕಿ ಸಲಹಿದ ಅಪ್ಪ ಅಮ್ಮನನ್ನು ಜೀವನದ ಕೊನೆವರೆಗೂ ಗೌರವದಿಂದ ಕಂಡು ಸುಖದ ನೆರಳಲ್ಲಿ ಇಟ್ಟು ಕೊಳ್ಳಬೇಕಾದುದು ಕರ್ತವ್ಯ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪ್ರಾಂಶುಪಾಲ ಕೆ.ಕೆ. ನಾಗರಾಜ್, ವೃದ್ಧಾಶ್ರಮದ ವ್ಯವಸ್ಥಾಪಕ ಹರಿಸಿಂಗ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement