ಸಮಾವೇಶಕ್ಕೆ ಬಾರದ ಜನಪ್ರತಿನಿಧಿಗಳು: ಆಕ್ಷೇಪ
ನರಸಿಂಹರಾಜಪುರ: ಸಹಕಾರಿಗಳ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಸೋಮವಾರ ನಡೆದ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಹಲವು ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಿಲ್ಲ ಎಂದು ಶಾಸಕ ಡಿ.ಎನ್. ಜೀವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಡಕೆ ಬೆಳೆಗಾರರು ಈಗ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು 300 ಪುಟದ ವರದಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದು, ಇದರಲ್ಲಿ ಗುಟ್ಕಾ ಜತೆಗೆ ಅಡಕೆ ನಿಷೇಧಿಸಬೇಕು ಎಂದು ಮನವಿ ಮಾಡಲಾಗಿದೆ. ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರಿಗೆ ಕೇಂದ್ರ ಸರ್ಕಾರವು 1400 ಕೋಟಿ ಪರಿಹಾರ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈಗ ಪರಿಹಾರ ಹೋಗಲಿ, ಅಡಕೆ ಬೆಳೆಯಲು ಬಿಟ್ಟರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದರು.
5 ಕೋಟಿ ಬಿಡುಗಡೆ: ಶೃಂಗೇರಿ, ಕೊಪ್ಪ, ನ.ರಾ.ಪುರ ಪಟ್ಟಣಗಳಿಗೆ ತಲಾ 5 ಕೋಟಿ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗಿದೆ. ರಸ್ತೆ ಕಾಮಗಾರಿಯ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಉದ್ಘಾಟನೆ ಮಾಡಿಸಲು ಚಿಂತನೆ ನಡೆಸಲಾಗುತ್ತದೆ. ಆದರೆ, ಕೆಲವು ಹಿತಾಸಕ್ತಿಗಳು ಕಾಮಗಾರಿ ನಿಲ್ಲಿಸಲು ಸೂಚನೆ ನೀಡಿದ್ದಾರೆ.
ಇದು ಸರಿಯಲ್ಲ. ಉದ್ಘಾಟನೆ ದಿನಾಂಕ ನಿಶ್ಚಯವಾಗುವರೆಗೆ ಕಾಮಗಾರಿ ನಿಲ್ಲಿಸುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಬೆಳವಣಿಗೆ ಶೃಂಗೇರಿ ಕ್ಷೇತ್ರದಲ್ಲಿ ಆಗಬಾರದಿತ್ತು ಎಂದು ತಿಳಿಸಿದರು.
36 ಕೋಟಿ ಬಿಡುಗಡೆ: ಆಲ್ದೂರು- ಬಾಳೆಹೊನ್ನೂರು ರಸ್ತೆಗೆ 23 ಕೋಟಿ ಹಾಗೂ ಶೃಂಗೇರಿ ಕ್ಷೇತ್ರಕ್ಕೆ 16 ಕೋಟಿ ಈ ಹಿಂದೆ ಮಂಜೂರಾಗಿದ್ದರೂ ಹಣ ಬಿಡುಗಡೆಯಾಗದಂತೆ ತಡೆ ಹಿಡಿಯಲಾಗಿತ್ತು. ಈಗ ಲೋಕೋಪಯೋಗಿ ಇಲಾಖೆ ಮಂತ್ರಿಗಳು ಹಣ ಬಿಡುಗಡೆ ಮಾಡಿಸಿದ್ದಾರೆ. ಹೊಸದಾಗಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ. ಕುದುರೆಗುಂಡಿ-ಮುತ್ತಿನಕೊಪ್ಪ ರಸ್ತೆಗೆ 8 ಕೋಟಿ, ಬಾಳೆಹೊನ್ನೂರು ರಸ್ತೆಗೆ 6 ಕೋಟಿ, ಮಾರದಿಬ್ಬ ರಸ್ತೆಗೆ 2 ಕೋಟಿ, ಹೇರೂರು-ಬರಿಕಟ್ಟೆ ರಸ್ತೆಗೆ 2 ಕೋಟಿ, ಜಯಪುರ- ಬಾಳೆಹೊನ್ನೂರು ರಸ್ತೆಗೆ 1.40 ಕೋಟಿ, ಬೇಗಾರು ಸೇತುವೆಗೆ 50 ಲಕ್ಷ, ಖಾಂಡ್ಯ- ಸಂಗಮೇಶ್ವರಪೇಟೆ ರಸ್ತೆಗೆ 2 ಕೋಟಿ, ಕೊಪ್ಪ-ಜಯಪುರ ರಸ್ತೆಗೆ 5 ಕೋಟಿ, ಹೇರೂರು- ಬಸರಿಕಟ್ಟೆ ರಸ್ತೆಗೆ 4 ಕೋಟಿ ಮಂಜೂರಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನೀಲೇಶ್, ಎಸ್. ಗೋಪಾಲ್, ಕೆಸುವೆ ಮಂಜುನಾಥ್ ಉಪಸ್ಥಿತರಿದ್ದರು.