ಜೀವರಾಜ್ ಕ್ಷಮೆಯಾಚಿಸಿದ ಸಚಿವ ಜೈನ್
ಕನ್ನಡಪ್ರಭ ವಾರ್ತೆ,ಚಿಕ್ಕಮಗಳೂರು,ಜ.2
ಜಿಲ್ಲೆಯಲ್ಲಿ ಶಾಸಕರ ಹಕ್ಕಿಗೆ ಚ್ಯುತಿಯಾಗುತ್ತಿದೆ. ಶಾಸಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾದ ಉತ್ತರ ನೀಡುವಂತೆ ಪ್ರತಿಪಕ್ಷದ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರನ್ನು ಆಗ್ರಹಿಸಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಆರಂಭದಲ್ಲೇ ಶಾಸಕರ ಹಕ್ಕಿಗೆ ಸಂಬಂಧಿಸಿದಂತೆ ಸುಮಾರು ಒಂದು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಯಿತು. ಕೊನೆಯಲ್ಲಿ ಸಚಿವರು ಕ್ಷಮೆಯಾಚಿಸಿದರು.
ದೀರ್ಘ ಚರ್ಚೆ: ಬುಧವಾರದಂದು ಕೊಪ್ಪ ತಾಲೂಕು ಪಂಚಾಯ್ತಿಯಲ್ಲಿ ಕಾರ್ಯಕ್ರಮ ನಡೆಸಿ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ನೀಡಿಲ್ಲ. ಇದಕ್ಕೆ ಕಾರಣ ಏನು, ಸರ್ಕಾರದ ಸವಲತ್ತು ನೀಡುವಂತೆ ಶಾಸಕರು ಶಿಫಾರಸ್ಸು ಪತ್ರ ನೀಡಲು ಅವಕಾಶ ಇಲ್ಲವೇ, ಶಾಸಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸ್ಪಷ್ಟವಾದ ಉತ್ತರ ಬೇಕೆಂದು ಶಾಸಕ ಡಿ.ಎನ್. ಜೀವರಾಜ್ ಆಗ್ರಹಿಸಿದರು.
ಆಗ ಸಚಿವರು ಉತ್ತರ ನೀಡಲು ಮುಂದಾಗುತ್ತಿದ್ದಂತೆ ಮೊದಲು ಜೀವರಾಜ್ ಅವರು ಮಾತು ಮುಗಿಸಲೀ ನಂತರದಲ್ಲಿ ತಾವು ಉತ್ತರ ನೀಡಿ ಎಂದು ವೈಎಸ್ವಿ ದತ್ತ ಅವರು ಸಚಿವರಿಗೆ ಹೇಳಿದರು. ಆಗ ಜೀವರಾಜ್ ಅವರು ಮತ್ತೆ ಮಾತು ಆರಂಭಿಸಿ, ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷದವರಲ್ಲ, ರಾಜ್ಯದಲ್ಲಿರುವುದು ಕಾಂಗ್ರೆಸ್ ಸರ್ಕಾರ ಅಲ್ಲ, ಇದು, ಕರ್ನಾಟಕ ಸರ್ಕಾರ, ಕಾಂಗ್ರೆಸ್ ಸರ್ಕಾರ ಎನ್ನುವುದಾದರೆ ಇದಕ್ಕೆ ತಮ್ಮ ವಿರೋಧ ಇದೆ. ನಮ್ಮ ಮರ್ಯಾದೆ ತೆಗೆಯಲು ಕೊಪ್ಪದಲ್ಲಿ ಕಾರ್ಯಕ್ರಮ ಮಾಡಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದರು.
ಅಧಿಕಾರಿಗಳಿಗೆ ಸಂದೇಶ ಕಳುಹಿಸಿ: ಜೀವರಾಜ್ ಪ್ರಸ್ತಾಪಿಸಿದ ವಿಷಯ ತುಂಬಾ ಗಂಭೀರವಾದುದು, ನಾವಿಂದು ತಮ್ಮಿಂದ ಪಾಠ ಹೇಳಿಸಿಕೊಳ್ಳಲು ಬಂದಿದ್ದೇವೆ. ಈ ಸಭೆಯಲ್ಲಿ ಶಾಸಕರ ಹಕ್ಕು ಮತ್ತು ಕರ್ತವ್ಯ ಏನೆಂಬುದು ಅಧಿಕಾರಿಗಳಿಗೆ ಸ್ಪಷ್ಟವಾದ ಸಂದೇಶ ಹೋಗಬೇಕು. ಶಾಸಕರ ಹಕ್ಕಿಗೆ ಚ್ಯುತಿ, ಇದನ್ನು ಕಡೂರಿನಲ್ಲಿ ಸ್ವತಃ ತಾವು ಸಹ ಅನುಭವಿಸಿದ್ದೇನೆ ಎಂದು ಶಾಸಕ ವೈಎಸ್ವಿ ದತ್ತ ಹೇಳಿದರು.
ಶಾಸಕ ಬಿ.ಬಿ. ನಿಂಗಯ್ಯ ಮಾತನಾಡಿ, ಇದು, ನಿಮಗೂ ಕಹಿ ಅನುಭವ ಅಗಬಾರದು. ಇಂತಹದಕ್ಕೆ ಮುಂದೆ ಅವಕಾಶ ನೀಡಬಾರದು. ಅಧಿಕಾರಿಗಳಿಗೆ ಗೊಂದಲ ಆಗಬಾರದು ಎಂದು ಸಲಹೆ ನೀಡಿದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಅಧಿಕಾರ ಯಾರಿಗೂ ಶಾಶ್ವತವಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋತವರಿಗೆ ಅಧಿಕಾರಿಗಳು ಮಣೆ ಹಾಕುವಂತಾಗಬಾರದು. ಹಿತ್ತಾಳೆ ಕಿವಿಯಾಗಬಾರದು. ಸಂವಿಧಾನದ ಪ್ರತಿನಿಧಿಯಾಗಿರುವ ಶಾಸಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕು. ಇಲ್ಲದೆ ಹೋದರೆ ಖಬಾರ್ ಸ್ಥಾನದ ಸ್ಮಾರಕಗಳಾಗುತ್ತೇವೆ. ಸೋತವರಿಗೂ ಸಂವಿಧಾನದಲ್ಲಿ ಅವಕಾಶ ನೀಡಿದ್ದೇಯಾದರೆ ಮತ್ತೊಂದು ವಿಧಾನಸೌಧವನ್ನು ಕಟ್ಟಬೇಕಾಗುತ್ತದೆ. ಪಕ್ಷದ ರಾಜಕಾರಣ ಮಾಡುವುದಾದರೆ, ಅದಕ್ಕಾಗಿ ಪಕ್ಷದ ವೇದಿಕೆ ಇದೆ. ಅಲ್ಲಿ ಹೋಗಿ ರಾಜಕಾರಣ ಮಾಡಲಿ ಎಂದು ಹೇಳಿದರು.
ದಬ್ಬಾಳಿಕೆ ರಾಜಕಾರಣ ಬೇಡ: ಚುನಾವಣೆಯಲ್ಲಿ ಸೋತವರು ತಮ್ಮ ತಮ್ಮ ಇತಿಮಿತಿಯೊಳಗೆ ಇರಬೇಕು. ದಬ್ಬಾಳಿಕೆಯ ರಾಜಕಾರಣ ಒಳ್ಳೆಯದಲ್ಲ, ಫಲಾನುಭವಿಗಳ ಆಯ್ಕೆಯ ಜವಬ್ದಾರಿಯನ್ನು ಶಾಸಕರಿಗೆ ನೀಡಲಾಗಿದೆ ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರು ಮಾತನಾಡಿ, ಕೊಪ್ಪದಲ್ಲಿ ನಡೆದಿರುವುದು ಆಹವಾಲು ಸ್ವೀಕಾರ ಸಮಾರಂಭವೇ, ಪ್ರಗತಿ ಪರಿಶೀಲನಾ ಸಭೆಯೋ, ಜನಸಂಪರ್ಕ ಸಭೆಯೋ ಎಂಬುದು ಸ್ಪಷ್ಟವಾಗಬೇಕು. ಪ್ರಗತಿ ಪರಿಶೀಲನಾ ಸಭೆಯಾಗಿದ್ದರೆ, ಅದಕ್ಕೆ ಶಾಸಕರಿಗೆ ಆಹ್ವಾನ ನೀಡಿದೆ ಇರುವುದು ತಪ್ಪಾಗುತ್ತದೆ. ಫಲಾನುಭವಿಗಳ ಶಿಫಾರಸ್ಸು ಪತ್ರ ನೀಡಲು ಶಾಸಕರಿಗೆ ಹಕ್ಕಿದೆ ಎಂದು ಹೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಜೀವರಾಜ್ ಕೊಪ್ಪದಲ್ಲಿ ನಡೆದಿದ್ದು ಪ್ರಗತಿ ಪರಿಶೀಲನಾ ಸಭೆ. ಸಂಬಂಧಪಡದೆ ಇರುವವರನ್ನು ಕರೆಸಿ ಸಭೆಯನ್ನು ನಡೆಸಲಾಗಿದೆ. ಅಲ್ಲಿ ನಾಯಿಸಂತೆಯಂತೆ ಬೇರೆಯವರು ಸೇರಿಕೊಂಡಿದ್ದರು. ಇದು, ಬ್ಲಾಕ್ ಮೇಲ್ ತಂತ್ರ ಅಲ್ಲ, ಸಚಿವರು ದೇವರಂತಹವರು ಎಂದು ಹೇಳುತ್ತಿದ್ದಂತೆ, ಅಲ್ಲಿ ನೋಡಿ ಸಚಿವರು ದೇವರಂತೆ ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ಮೋಟಮ್ಮ ಹಾಸ್ಯವಾಗಿ ಹೇಳಿದರು.
ಮನಸ್ಥಿತಿ ಬದಲಾಗಿಲ್ಲ: ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಶಾಸಕರಿಗೆ ಪತ್ರ ನೀಡಲು ಹಕ್ಕಿದೆ. ಜೀವರಾಜ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಕೊಪ್ಪದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿತ್ತು. ಆಗ ಅವರದೇ ಪಕ್ಷದವರು ಸಭೆಯಲ್ಲಿ ಕುಳಿತುಕೊಂಡಿದ್ದ ಸಂದರ್ಭದಲ್ಲಿ ಈ ಕುರಿತು ಪ್ರಶ್ನೆ ಮಾಡಿದಾಗ, ವಿಷಯ ತಿಳಿದುಕೊಳ್ಳಲು ಬಂದಿದ್ದಾರೆ ಎಂದು ಅವರೇ ಹೇಳಿದ್ದರು. ಕೊಪ್ಪ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇಂದಿಗೂ ಸಹ ಡಿ.ವಿ. ಸದಾನಂದಗೌಡರ ಪೋಟೋ ಇದೆ. ಸರ್ಕಾರ ಬದಲಾದರೂ ಅಧಿಕಾರಿಗಳ ಮನಸ್ಥಿತಿ ಬದಲಾಗಿಲ್ಲ ಎಂದರು.
ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕೊಪ್ಪದಲ್ಲಿ ನಡೆಯುತ್ತಿರುವುದು ಪಕ್ಷದ ಕಾರ್ಯಕರ್ತರ ಸಭೆ ಎಂದು ಹೇಳಿದ್ದರು. ಅಲ್ಲಿಗೆ ಅಧಿಕಾರಿಗಳು ಬಂದಾಗ, ಶಾಸಕರು ಇಲ್ಲದೆ ಪ್ರಗತಿ ಪರಿಶೀಲನೆ ನಡೆಸಲು ಆಗುವುದಿಲ್ಲ. ಅದುದರಿಂದ ಇಲ್ಲಿಗೆ ಬರುವುದು ಬೇಡ ಎಂದು ಅಧಿಕಾರಿಗಳನ್ನು ವಾಪಸ್ ಕಳುಹಿಸಿದೆ. ಈ ವಿಷಯದಲ್ಲಿ ತಪ್ಪಾಗಿದೆ. ಕ್ಷಮೆ ಕೋರುತ್ತೇನೆ. ಕಾನೂನಿಗೆ ಬೆಲೆ ಕೊಡುವ ಕೆಲಸ ಆಗಬೇಕು. ಶಾಸಕರಿಗೆ ಗೌರವ ಕೊಡಬೇಕು, ತಪ್ಪಾಗಿದೆ ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಹೇಳಿದರು.
ಆಗ ಜೀವರಾಜ್ ಮಾತನಾಡಿ, ಕೈ ಮುಗಿದು ಕೇಳುತ್ತೇನೆ. ಈ ವಿಷಯ ಇಲ್ಲಿಗೆ ಮುಗಿಸೋಣ ಎಂದು ಹೇಳಿದರು.