ಅರ್ಹರಿಗೆ ಸವಲತ್ತು ತಲುಪಲಿ: ಇಂದ್ರಮ್ಮ
ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ ಜ.3
ಸರ್ಕಾರ ನೀಡುತ್ತಿರುವ ವಿವಿಧ ಸವಲತ್ತುಗಳನ್ನು ಅರ್ಹ ಫಲಾನುಭವಿ ಗುರುತಿಸಿ ನೀಡಬೇಕು ಎಂದು ಇಂದಾವರ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಇಂದಾವರ ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ 2013- 14ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಕಾಮಗಾರಿಯ ಆದೇಶ ಪತ್ರ ವಿತರಿಸಿ ಮಾತನಾಡಿ, ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಇಂದಿರಾ ಆವಾಸ್ ಯೋಜನೆಯಡಿ ಸರ್ಕಾರ 1.20 ಲಕ್ಷ ನೀಡುತ್ತಿದ್ದು, ಫಲಾನುಭವಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದರು.
ಮನೆ ಕಟ್ಟಿಕೊಳ್ಳಲು ಸರ್ಕಾರ ಹಂತ- ಹಂತವಾಗಿ ಹಣ ಬಿಡುಗಡೆ ಮಾಡುತ್ತಿದೆ. ವಸತಿ ಯೋಜನೆಯಲ್ಲಿ ಈಗಾಗಲೇ ಅರ್ಹ ಫಲಾನುಭವಿಗಳನ್ನು ಗುರುತಿಸಿ ಮನೆ ಕಟ್ಟಿಕೊಳ್ಳಲು ಪ್ರೋತ್ಸಾಹಧನ ನೀಡಲಾಗಿದೆ. ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಚೆಕ್ಕು ವಿತರಿಸಲಾಗುತ್ತಿದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ಕಾಳಮ್ಮ, ಸದಸ್ಯರಾದ ಜಯಮ್ಮ, ಶೋಭಾ, ಕೆಂಚಯ್ಯ, ಶಂಕರ್, ಅಭಿವೃದ್ಧಿ ಅಧಿಕಾರಿ ಫರೀದಾ ಬಾನು, ಲೆಕ್ಕ ಸಹಾಯಕ ಧರ್ಮಪ್ಪ, ಬೋರಣ್ಣಗೌಡ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.