ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ
ನರಸಿಂಹರಾಜಪುರ: ಅಖಿಲ ಕರ್ನಾಟಕ ವಿಶ್ವ ಕರ್ಮ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಕೆ.ಪಿ. ನಂಜುಂಡಿ ನೇತೃತ್ವದಲ್ಲಿ ನಡೆಯುವ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಕರಣಾ ದಿನವನ್ನು ಬೆಂಬಲಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಪತ್ರ ಅರ್ಪಿಸಲಾಯಿತು.
ರಾಜ್ಯದಲ್ಲಿ ಸುಮಾರು 33 ಲಕ್ಷ ಜನ ಸಂಖ್ಯೆ ಇರುವ ವಿಶ್ವ ಕರ್ಮ ಸಮಾಜವು ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತ ಬಂದಿದೆ. 900 ವರ್ಷಗಳ ಹಿಂದೆ ಬೇಲೂರು, ಹಳೇಬೀಡುಗಳಲ್ಲಿ ಅದ್ಭುತ ಶಿಲ್ಪಕಲೆಯ ದೇವಾಲಯಗಳನ್ನು ನಿರ್ಮಿಸಿ ಜಗತ್ತಿಗೆ ಅಭೂತ ಪೂರ್ವ ಕಾಣಿಕೆ ನೀಡಿದ ಜಕಣಾಚಾರ್ಯರು ಮೇರು ವ್ಯಕ್ತಿತ್ವ ಹೊಂದಿದ್ದಾರೆ. ಆದರೂ, ಸರ್ಕಾರವು ಜಕಣಾಚಾರ್ಯರನ್ನು ನಿರ್ಲಕ್ಷಿಸಿದೆ ಎಂದು ಮನವಿ ಪತ್ರದಲ್ಲಿ ದೂರಲಾಗಿದೆ. ಈ ಸಂದರ್ಭದಲ್ಲಿ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಶಂಕರ ಆಚಾರ್ಯ, ಕಾಳಮ್ಮ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಮಂಜುನಾಥ ಆಚಾರ್ಯ, ವಿಶ್ವ ಕರ್ಮ ಸಂಘಟನಾ ಸಮಿತಿ ಅಧ್ಯಕ್ಷ ಎಂ.ಎನ್. ಪ್ರಕಾಶ್ ಆಚಾರ್ಯ, ಕಾಳಿಕಾಂಬಾ ದೇವಾಲಯದ ಧರ್ಮಾಧಿಕಾರಿ ಸತೀಶ್ ಆಚಾರ್ಯ, ಮುಖಂಡರಾದ ನಳಿನಾಕ್ಷ ಆಚಾರ್ಯ, ರವಿಶಂಕರ ಆಚಾರ್ಯ ಇದ್ದರು.