ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸೌಲಭ್ಯಕ್ಕಾಗಿ ಸಂಘಟಿತ ಹೋರಾಟ ನಡೆಸಿ

Rashmi Kasaragodu
Updated On : 4 Jan 2014, 11:44 am

ಚಿಕ್ಕಮಗಳೂರು: 64 ವಿದ್ಯೆಗಳಲ್ಲಿ ಅಡುಗೆ ಕೆಲಸ ಮಾಡುವ ವಿದ್ಯೆಯೇ ಅತ್ಯಂತ ಶ್ರೇಷ್ಠವಾದುದು. ಅದನ್ನು ಕರಗತ ಮಾಡಿಕೊಂಡು ಸಮಾಜದ ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದರೆ ಜೀವನದಲ್ಲಿ ಸಾರ್ಥಕತೆ ಕಾಣಬಹುದೆಂದು ಹುಲಿಕೆರೆ ದೊಡ್ಡ ಮಠದ ವಿರೂಪಾಕ್ಷಲಿಂಗ ಸ್ವಾಮೀಜಿ ಹೇಳಿದ್ದಾರೆ.
ನಗರದ ಬಸವನಹಳ್ಳಿ ಬೆಸುಗೆ ಮೂರ್ತಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಡುಗೆ ಕೆಲಸಗಾರರು ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಸಂಘಟಿತ ಕಾರ್ಮಿಕರು ಅಡುಗೆ ಕೆಲಸ ಮಾಡುವ ಸಂದರ್ಭದಲ್ಲಿ ಸಣ್ಣ, ಪುಟ್ಟ ದುರ್ಘಟನೆಗಳು ಸಂಭವಿಸಿದಾಗ ಸಹಾಯಕ್ಕೆ ಯಾರೂ ಬರುವುದಿಲ್ಲ ಹಾಗಾಗಿ ವೃತ್ತಿಯಲ್ಲಿ ದ್ವೇಷ ಭಾವನೆ ಬೆಳೆಸಿಕೊಳ್ಳದೆ ಸಹೋದರತೆ ಜೊತೆ ಒಗ್ಗಟ್ಟಿನಿಂದ ಹೋರಾಡುವ ಮೂಲಕ ಸರ್ಕಾರದ ಸೌಲಭ್ಯವನ್ನು ಕಾನೂನು ರೀತಿ ಪಡೆದುಕೊಳ್ಳುವಲ್ಲಿ ಯಶಸ್ಸು ಕಾಣಬೇಕು ಎಂದು ಸಲಹೆ ಮಾಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ಮಾತನಾಡಿ, ಸಮಾಜದಲ್ಲಿ ಎರಡು ವರ್ಗಗಳಿವೆ. ಒಂದು ದುಡಿದು ತಿನ್ನುವ ವರ್ಗ, ಮತ್ತೊಂದು ಹೊಡೆದು ತಿನ್ನುವ ವರ್ಗ. ನೀವು ಶ್ರಮದಿಂದ ಕೆಲಸ ಮಾಡಿ ದುಡಿದು ತಿನ್ನುವ ವರ್ಗಕ್ಕೆ ಸೇರಿದವರು. ಅಸಂಘಟಿತ ಕಾರ್ಮಿಕರು ಸರ್ಕಾರದ ಕಣ್ಣಿಗೆ ಬಿದ್ದಿಲ್ಲ. ಸ್ವ ಪ್ರತಿಷ್ಠೆ ಬಿಟ್ಟು ಸಂಘಟನಾತ್ಮಕವಾಗಿ ಹೋರಾಟ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಣ್ತೆರೆಸಿದಾಗ ಸೌಲಭ್ಯಗಳು ದಕ್ಕುತ್ತವೆ. ನಿಮ್ಮ ಯಾವುದೇ ಹೋರಾಟಕ್ಕೂ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದರು.
ಜಿಲ್ಲಾಧ್ಯಕ್ಷ ಆನಂದ್ ಮಾತನಾಡಿ, ಗುರು ಇಲ್ಲದ ಜಗತ್ತು ಶೂನ್ಯ. ಎಲ್ಲ ಕ್ಷೇತ್ರದಲ್ಲೂ ಗುರುಗಳಿದ್ದಾರೆ. ನಾಲ್ಕು ವರ್ಷದ ಹಿಂದೆ 10 ಜನರಿಂದ ಆರಂಭವಾದ ಸಂಘ ಇಂದು 180ಕ್ಕೂ ಹೆಚ್ಚು ಸದಸ್ಯರ ಬಲ ಹೊಂದಿದೆ. ಅನಕ್ಷರಸ್ಥರೇ ಹೆಚ್ಚಿದ್ದರೂ ಆ ಭಾವನೆ ಬಿಟ್ಟು ಸಮಾಜ ಸೇವಾ ಕಾರ್ಯದಲ್ಲಿ ತೊಡಗಬೆಕು. ಎಲ್ಲರೂ ಸಂಘಟಿತರಾಗಿ ನಮ್ಮಲ್ಲಿರುವ ಬಡ ಕುಟುಂಬಗಳ ಏಳಿಗೆಗೆ ಶ್ರಮಿಸಿ ಸಂಘ ಮುನ್ನಡೆಸೋಣ ಎಂದರು.
ತಾಲೂಕು ಅಧ್ಯಕ್ಷ ಶಾಮಣ್ಣ, ಗೌರವಾಧ್ಯಕ್ಷ ಆನಂದ್ ಶೆಟ್ಟಿ, ಉಪಾಧ್ಯಕ್ಷ ನರಸಿಂಹ ಭಟ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ವೀರಣ್ಣ, ತಿಪಟೂರಿನ ನಾಗರಾಜ್, ಪರಮೇಶ್ ಮಾತನಾಡಿದರು. ಸೌಮ್ಯ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement