ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಳುಗುಳ ಘಟನೆ: ತಪ್ಪಿತಸ್ಥರ ವಿರುದ್ಧ ಕ್ರಮ: ಎಸ್ಪಿ

Rashmi Kasaragodu
Updated On : 5 Jan 2014, 12:49 pm

ಮೂಡಿಗೆರೆ: ಹೊರಗಿನಿಂದ ಬಂದು ಪಟ್ಟಣದಲ್ಲಿ ನೆಲೆಸಿರುವ ಕೆಲವು ಕಿಡಿಗೇಡಿಗಳು ಕೋಮು ಸಾಮರಸ್ಯ ಹಾಳು ಮಾಡುವ ಪ್ರಯತ್ನದಲ್ಲಿ ತೊಡಗಿದ್ದು ಅಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮೂಡಿಗೆರೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ನಡೆದ ಶಾಂತಿ ಸಮಿತಿ ಸಭೆಯಲ್ಲಿ ಒತ್ತಾಯಿಸಲಾಯಿತು.
 ಘಟನೆ ನಡೆದ ಬಿಳುಗುಳ ಗ್ರಾಮದಲ್ಲಿ ಮೊದಲಿನಿಂದಲೂ ಹಿಂದೂ ಮುಸ್ಲೀಮರು ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ. ಆದರೆ ಇತ್ತೀಚಿನ ಕೆಲವು ವರ್ಷಗಳ ಹಿಂದೆ ಬಂದು ಸೇರಿಕೊಂಡಿರುವ ಕೆಲವು ವ್ಯಕ್ತಿಗಳು ಗ್ರಾಮದ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಗಾ ಇಡಬೇಕು ಎಂದು ಆಗ್ರಹಿಸಿದರು.
ಬಂಧಿಸಲು ಒತ್ತಾಯ: ಶುಕ್ರವಾರ ಪೊಲೀಸರ ತನಿಖೆವೇಳೆ ನಾಯಿಗಳು ಅಲ್ತಫ್ ಎಂಬಾತನ ಮನೆಗೆ ತೆರಳಿರುವ ಹಿನ್ನೆಲೆಯಲ್ಲಿ ಅತನನ್ನು ಬಂಧಿಸಿ ತನಿಖೆಗೊಳಪಡಿಸಬೇಕು ಎಂದು ಹಲವರು ಒತ್ತಾಯಿಸಿದರು.
 ಎಂಟು ವರ್ಷಗಳಿಂದ ಮೂಡಿಗೆರೆ ಪಟ್ಟಣದಲ್ಲಿ ಯಾವುದೇ ರೀತಿಯ ಕೋಮು ಸಂಘರ್ಷಗಳು ಸಂಭವಿಸಿಲ್ಲ. ಹಿಂದೊಮ್ಮೆ ಹಂದಿ ಮಾಂಸವನ್ನು ಹಾಕಿ ಸಮಾಧಿ ಅಪವಿತ್ರಗೊಳಿಸಿದ ಘಟನೆ ನಡೆದಿತ್ತು ಇದಾದ ನಂತರ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಸ್ಥಳೀಯರೆಲ್ಲರೂ ಸೌಹಾರ್ಧತೆಯಿಂದ ಇದ್ದಾರೆ. ಕೆಲವು ಸಂಶಯಾತ್ಮಕ ವ್ಯಕ್ತಿಗಳಿಂದ ಕಿಡಿಗೇಡಿ ಕೃತ್ಯಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದರು.
 ದೇವಸ್ಥಾನದ ಸ್ವಾಗತ ಕಮಾನು ನಿರ್ಮಿಸುವ ವಿಚಾರದಲ್ಲಿ ಎರಡು ತಿಂಗಳ ಹಿಂದೆಯೇ ಅಲ್ತಾಫ್ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅಂದೇ ಅವರನ್ನು ಕರೆದು ವಿಚಾರಣೆ ನಡೆಸಿದ್ದರೆ ಅಹಿತಕರ ಘಟನೆ ನಡೆಯುತ್ತಿರಲಿಲ್ಲ ಎಂದು ಕೆಲವರು ಆರೋಪಿಸಿದರು.
ಕ್ರಮದ ಭರವಸೆ: ಎಲ್ಲ ಅಹವಾಲುಗಳನ್ನು ಆಲಿಸಿದ ಜಿಲ್ಲಾ ಎಸ್ಪಿ ಚೇತನ್ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜನತೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ. ಶಾಂತಿ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.  ಕಮಾನು ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ ಬಗ್ಗೆ ಹಿಂದೆಯೇ ದೂರು ನೀಡಲಾಗಿದ್ದರೂ ಪೊಲೀಸರು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದಿರುವುದು ತಪ್ಪು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕ್ಲಬ್, ಮಟ್ಕಾ ನಿಯಂತ್ರಣ: ಇದರೊಂದಿಗೆ ಕಳಸೇಶ್ವರ ದೇವಸ್ಥಾನದಲ್ಲಿ ನಡೆದಿರುವ ಕಳವು ಪ್ರಕರಣ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವುದಲ್ಲದೆ. ಕ್ಲಬ್‌ಗಳು ಮತ್ತು ಮಟ್ಕಾ ದಂಧೆ ನಿಯಂತ್ರಣಕ್ಕೂ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
 ಸಭೆಯಲ್ಲಿ ಬಿಳುಗುಳ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ
ಅತುಲ್ ರಾವ್, ಹೆಸ್ಗಲ್ ಗ್ರಾಪಂ ಸದಸ್ಯರು, ವಿವಿಧ ಜನಾಂಗದ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಎಸ್.ಎಸ್.ಹಿರೇಮಠ್, ಅಪರಾಧ ವಿಭಾಗದ ಠಾಣಾಧಿಕಾರಿ ಸಂಕಪ್ಪಯ್ಯ, ಗೋಣಿಬೀಡು ಠಾಣಾಧಿಕಾರಿ ಪ್ರಶಾಂತ್, ಬಣಕಲ್ ಠಾಣಾಧಿಕಾರಿ ಹಾಲಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement