ಅನಿಲ ದರ ಹೆಚ್ಚಳ - ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ
ಚಾಮರಾಜನಗರ: ಕೇಂದ್ರ ಸರ್ಕಾರ ಅಡುಗೆ ಅನಿಲ ಮತ್ತು ಆಟೋ ಅನಿಲ ದರ ಹೆಚ್ಚಳ ಮಾಡಿರುವುದನ್ನು ಖಂಡಿಸಿ ಚಾಮರಾಜನಗರದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಹೊರಟ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ, ಕೆಲಕಾಲ ರಸ್ತೆ ತಡೆ ನಡೆಸಿದರು. ಬಳಿಕ ಬಿ. ರಾಚಯ್ಯ ಜೋಡಿ ರಸ್ತೆಯ ಮಾರ್ಗವಾಗಿ ಜಿಲ್ಲಾಡಳಿತ ಭವನ ತಲುಪಿ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಜನವಿರೋಧಿ ನೀತಿ: ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವಿ. ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಪದೇ ಪದೇ ಅಡುಗೆ ಅನಿಲ ಹಾಗೂ ಆಟೋ ಅನಿಲ ದರವನ್ನು ಪರಿಷ್ಕರಣೆ ಮಾಡಿ ಬಡ ಹಾಗೂ ಮಧ್ಯಮ ವರ್ಗದ ಮೇಲೆ ಗಧಾಪ್ರಹಾರ ಮಾಡಲು ಹೊರಟಿದೆ. ಅಡುಗೆ ಅನಿಲ ದರವನ್ನು ಏಕಾಏಕಿ 220 ರು.ಗಳನ್ನು ಹೆಚ್ಚಳ ಮಾಡಿದೆ. ಕಳೆದ ಒಂದು ತಿಂಗಳಲ್ಲೇ ಮೂರು ಬಾರಿ ಅನಿಲ ದರವನ್ನು ಹೆಚ್ಚಳ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವ ಪಡಿತರರಿಗೆ ಶೇ. 50 ರಷ್ಟು ರಿಯಾಯಿತಿ ನೀಡಬೇಕು. ಅಲ್ಲದೇ ಗ್ಯಾಸ್ ಹೊಂದಿರುವ ಆಟೋ ಚಾಲಕರಿಗೂ ಶೇ. 50 ರಿಯಾಯಿತಿ ನೀಡಬೇಕು. ನೀಡದಿದ್ದರೆ ಮುಂದಿನ ದಿನಗಳಲ್ಲಿ ಯುವ ಮೋರ್ಚಾದಿಂದ ಕೇಂದ್ರ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಸೋನಿಯಾ ಕೈಗೊಂಬೆ: ಜಿಲ್ಲಾ ಉಪಾಧ್ಯಕ್ಷ ಎಸ್. ಬಾಲಸುಬ್ರಮಣ್ಯ ಮಾತನಾಡಿ, ಹಣ ದುಬ್ಬರವನ್ನು ತಡೆಯಲು ಸಾಧ್ಯವಾಗದ ಹಾಗೂ ಪ್ರಧಾನಿ ಹುದ್ದೆಯನ್ನು ಸಮರ್ಥವಾಗಿ ನಿಭಾಸದೇ ಸೋನಿಯಾ ಕೈಗೊಂಬೆಯಾಗಿರುವ ಪ್ರಧಾನಿ ಸಿಂಗ್ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್, ನಾಗೇಶ್ನಾಯಕ, ಜಿಲ್ಲಾ ವಕ್ತಾರ ರ.ನಾರಾಯಣಗೌಡ, ನಗರಸಭಾ ಸದಸ್ಯ ರಾಜೇಶ್, ಶಿವಕುಮಾರ್, ಜಿಲ್ಲಾಧ್ಯಕ್ಷೆ ಜಯಶೀಲಾ ರಾಜಶೇಖರ್, ಮಂಗಳಮ್ಮ, ದಾಕ್ಷಾಯಿಣಿ ಇತರರು ಇದ್ದರು.