ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಗಮನ ಸೆಳೆದ ವಿದ್ಯಾರ್ಥಿಗಳ ಯುವ ಸಂಸತ್

Lingaraj Badiger
Updated On : 6 Jan 2014, 10:48 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜ.5
ನಗರದ ಎಸ್‌ಟಿಜೆ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶನಿವಾರ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ಯುವ ಸಂಸತ್ ಸ್ಪರ್ಧೆಯ ಅಂಗವಾಗಿ ನಡೆದ ಅಧಿವೇಶದಲ್ಲಿ ವಿದ್ಯಾರ್ಥಿಗಳ ಸಮಸ್ಯೆ ಕುರಿತ ಗಂಭೀರ ಚರ್ಚೆ ನಡೆಸುವ ಮೂಲಕ ಗಮನ ಸೆಳೆದರು.
ಮುಖ್ಯಮಂತ್ರಿ ತನ್ಮಯಿ (ಟಿಎಂಎಸ್) ಶಾಸಕರ ಪ್ರಶ್ನೆಗೆ ಉತ್ತರಿಸಿ, ಪ್ರತಿ ಹಳ್ಳಿಗಳಿಗೆ ಕನಿಷ್ಠ ಎರಡು ಹೊತ್ತು ಕೆಎಸ್‌ಆರ್‌ಟಿಸಿ ಬಸ್ ಸಂಪರ್ಕ ಕಲ್ಪಿಸಲಾಗುವುದು. ಶಾಲಾ- ಕಾಲೇಜು ಅವಧಿಯಲ್ಲಿ ಪ್ರತಿ ಬಸ್‌ನಲ್ಲೂ 10 ರಿಂದ 15 ವಿದ್ಯಾರ್ಥಿಗಳನ್ನು ಕರೆದೊಯ್ಯುವುದನ್ನು ಕಡ್ಡಾಯಗೊಳಿಸುವುದಾಗಿ ಮುಖ್ಯಮಂತ್ರಿಗಳು ಸದನದಲ್ಲಿ ಪ್ರಕಟಿಸಿದರು.
ಸದನ ಸಮಾವೇಶಗೊಂಡ ಪ್ರಥಮದಲ್ಲಿ ಮುಖ್ಯಮಂತ್ರಿಗಳು ಸಭಾಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯರ ಹೆಸರನ್ನು ಸೂಚಿಸಿದರು. ಸರ್ವಾನುಮತದ ಆಯ್ಕೆ ನಂತರ ಅಧ್ಯಕ್ಷ ಪೀಠಕ್ಕೆ ಇಬ್ಬರು ಮಾರ್ಷೆಲ್‌ಗಳು ಸಭಾಧ್ಯಕ್ಷ (ಮೇಘಾ) ರನ್ನು ಕರೆತಂದಿದ್ದು, ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಎಸ್.ಎಸ್. ಸಾಗರ್ (ಸಂತಜೋಸೆಫ್ ಪಿ.ಯು. ಕಾಲೇಜು) ಜೊತೆಗೂಡಿದರು.
ಆರಂಭದಲ್ಲಿ ಎಲ್ಲ ಸದಸ್ಯರಿಗೆ ಸದನಕ್ಕೆ ಸ್ವಾಗತಕೋರಿದ ಸಭಾಧ್ಯಕ್ಷರು, ಸಂತಾಪ ಸೂಚನೆಗಳನ್ನು ಮಂಡಿಸಲು ಆದೇಶಿಸಿದರು. ಡಾ. ಜಿ.ಎಸ್.ಎಸ್., ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತಿತರರಿಗೆ ಸಂತಾಪ ಸೂಚಿಸುವ ನಿರ್ಣಯ ಅಂಗೀಕರಿಸಿ 1 ನಿಮಿಷ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.
ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡ ಅಧ್ಯಕ್ಷರು ಸದಸ್ಯರು ಸಮಯದ ಪರಿಮಿತಿ, ಶಿಷ್ಟಾಚಾರ ಪಾಲಿಸುವಂತೆ ಸೂಚಿಸಿದರು. ಪ್ರತಿಪಕ್ಷದ ಕಡೆಯಿಂದ ಬರದ ಭೀಕರತೆ ತೂರಿಬಂತು. ಕೃಷಿ, ತೋಟಗಾರಿಕಾ ಬೆಳೆಗಳು ಹಾಳಾಗಿ 1,700 ಕೋಟಿಗೂ ಹೆಚ್ಚು ನಷ್ಟವಾಗಿದೆ. ರಾಜ್ಯದ 98 ತಾಲೂಕಿನಲ್ಲಿ ಬರ ಇರುವುದನ್ನು ಸರ್ಕಾರವೇ ಗುರುತಿಸಿದೆ. 3ನೇ ಬಾರಿ ಬರಕಾಡುತ್ತಿದೆ. ರೈತ ಸಾಲಕ್ಕೆ ಹೆದರಿ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ. ಮೇವು ಇಲ್ಲದೆ ದನ-ಕರುಗಳು ಪರದಾಡುತ್ತಿವೆ. ಸರ್ಕಾರ ಏನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಳ್ಳಲಾಯಿತು.
ಬರದ ಸಮಸ್ಯೆ ಇರುವುದನ್ನು ಒಪ್ಪಿಕೊಂಡ ಮುಖ್ಯಮಂತ್ರಿ, 5 ಕೋಟಿ ಈಗಾಗಲೇ ಬಿಡುಗಡೆ ಮಾಡಿದ್ದು, 507 ಕೋಟಿ ಸಾಲ ಮನ್ನಾ ಘೋಷಿಸಿದೆ. ಮೇವು, ನೀರು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಕನಿಷ್ಠ ದಿನಪೂರ್ತಿ ಸಿಂಗಲ್ ಪೇಸ್ ವಿದ್ಯುತ್ ನೀಡಲಾಗುವುದು. ಬರದ ಬಗ್ಗೆ ಜಿಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿದ್ದು, ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ ಎಂದು ಸಮಜಾಯಿಸಿ ನೀಡಿದರು.
ಹಾಡಹಗಲೇ ಕೊಲೆ-ದರೋಡೆ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ. ಎಟಿಎಂನಲ್ಲಿ ಮಹಿಳೆ ಕೊಲೆಯಾಗುತ್ತಿದೆ ಎಂದು ಶಾಸಕಿ (ಸುಶ್ಮಿತಾ ಎಂಇಎಸ್) ತರಾಟೆಗೆ ತೆಗೆದುಕೊಂಡರು. ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಪ್ರತ್ಯೇಕ ದಳ ಸ್ಥಾಪಿಸಿದೆ. ಭದ್ರತಾ ಸಿಬ್ಬಂದಿ ಹೆಚ್ಚಿಸಲಾಗುತ್ತಿದೆ. ಎಟಿಎಂನಲ್ಲಿ ಕೊಲೆಯಾಗಿಲ್ಲ ಹಲ್ಲೆಯಾಗಿದೆ ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಗೃಹ ಸಚಿವ (ಉಮಾಶಂಕರ್) ಉತ್ತರಿಸಿದರು.
ಕಬ್ಬಿಗೆ ಬೆಲೆ ಸಿಗುತ್ತಿಲ್ಲ. ಅ್ಙಕೆ ಬೆಲೆ ನಿಷೇಧಿಸಿದ್ದು, ರೈತರಿಗೆ ತೊಂದರೆಯಾಗಿದೆ ಎಂಬ (ಶ್ರೀನಿಧಿ ಎಂಇಎಸ್) ದೂರಿಗೆ ಸಮಜಾಯಿಸಿ ನೀಡಿದ ಕೃಷಿ ಸಚಿವರು, 500 ಕೋಟಿ ಕಬ್ಬು ಬೆಳೆಗಾರರಿಗೆ ನೀಡಲಾಗಿದೆ. ಅಡಕೆ ಬೆಳೆ ನಿಷೇಧ ಪ್ರಸ್ತಾಪವೇ ಸರ್ಕಾರದ ಮುಂದಿಲ್ಲ. ವಿವಿಧ ರೀತಿಯ ಸಬ್ಸಿಡಿಯನ್ನು ರೈತರಿಗೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಚಿಕ್ಕಮಗಳೂರಿನಲ್ಲಿ ಕೋಮುಗಲಭೆ ನಡೆದಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಯ ದೂರು ಠಾಣೆಯಲ್ಲಿ ಸ್ವೀಕರಿಸುತ್ತಿಲ್ಲ ಎಂಬೆಲ್ಲಾ ದೂರಿನ (ಅನೂಷಾ ಸಂತ ಜೋಸೆಫ್) ಸುರಿಮಳೆಗೆ ಸಮಾಜ ಕಲ್ಯಾಣ ಸಚಿವ (ಇಮ್ರಾನ್ ಪಾಷ) ವಿವರಣೆ ಪ್ರತಿಪಕ್ಷದ ಮುಖಂಡ (ಎಸ್.ಎಸ್. ಸಾಗರ್‌ನನ್ನೂ ಕೆರಳಿಸಿತು.
ಮುಖ್ಯಮಂತ್ರಿಗಳೇ ನೀಡಿದ ಉತ್ತರವೂ ಸಮರ್ಪಕ ಎನಿಸದ ಕಾರಣ ಕಾಲಾವಕಾಶದ ಕೊರತೆಯನ್ನೂ ಮುಂದಿಟ್ಟ ಸಭಾಧ್ಯಕ್ಷರು, ಚುಕ್ಕಿ ಪ್ರಶ್ನೆಗೆ ವರ್ಗಾಯಿಸಿರುವುದಾಗಿ ಆದೇಶಿಸಿದರು.
ಮುಖ್ಯಮಂತ್ರಿಗಳು ಸುದೀರ್ಘ ವಿವರಣೆಯ ನಂತರ ಸಭಾಧ್ಯಕ್ಷರು ವಿಧೇಯಕವನ್ನು ಮತಕ್ಕೆ ಹಾಕಿದರು.  ಆಡಳಿತ ಪಕ್ಷದ ಸದಸ್ಯರು ಹೌದು ಹೌದು ಎಂದು ಮೇಜು ಕುಟ್ಟಿ ಸ್ವಾಗತಿಸಿದರೆ, ಪ್ರತಿಪಕ್ಷದ ಸದಸ್ಯರು ಮೌನಕ್ಕೆ ಶರಣರಾದರು. ಹೌದು ಎನ್ನುವವರ ಪರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಧೇಯಕ ಅಂಗೀಕಾರಗೊಂಡಿತೆಂದು ಘೋಷಿಸಲಾಯಿತು. ಸಭಾಧ್ಯಕ್ಷರು ಅನಿರ್ದಿಷ್ಟ ಕಾಲಾವಧಿಗೆ ಕಲಾಪವನ್ನು ಮುಂದೂಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement